ಜೈಪುರ, ನ. 14 (DaijiworldNews/MB) : ''ಗಡಿಯಲ್ಲಿ ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರಲಾರೆವು. ಭಾರತ ಎಂದಿಗೂ ದೇಶದ ಹಿತಾಸಕ್ತಿ ವಿಚಾರದಲ್ಲಿ ರಾಜೀಯಾಗಲ್ಲ ಎಂಬುದು ವಿಶ್ವಕ್ಕೆ ತಿಳಿದಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಶನಿವಾರ ರಾಜಸ್ಥಾನದ ಜೈಸಾಲ್ಮೇರ್ನ ಲೋಂಗೆವಾಲದಲ್ಲಿ ಯೋಧರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ''ಈ ದೇಶದ ಘನತೆಯು ನಿಮ್ಮ ಪರಾಕ್ರಮ ಶಕ್ತಿಯ ಆಧಾರದಲ್ಲಿದೆ. ನೀವು ನಮಗೆ ರಕ್ಷಣೆ ನೀಡುತ್ತಲಿರುವವರೆಗೂ ದೇಶದಲ್ಲಿ ದೀಪಾವಳಿ ಆಚರಣೆ ಮುಂದುವರಿಯುತ್ತದೆ'' ಎಂದು ಯೋಧರನ್ನು ಉದ್ದೇಶಿಸಿ ಹೇಳಿದರು.
ಜಮ್ಮು ಕಾಶ್ಮೀರದಲ್ಲಿ ಶುಕ್ರವಾರ ಪಾಕಿಸ್ತಾನ ಪಡೆಯ ಅಪ್ರಚೋದಿತ ದಾಳಿಯಿಂದಾಗಿ ಐವರು ಯೋಧರು ಸೇರಿದಂತೆ 11 ಮಂದಿ ಹುತಾತ್ಮರಾಗಿದ್ದಾರೆ. ಈ ವೇಳೆ ಭಾರತ ಸೇನೆಯು ಪ್ರತಿದಾಳಿ ನಡೆಸಿದ್ದು 11 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ''ಗಡಿಯಲ್ಲಿ ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರಲ್ಲ. ಭಾರತ ಯಾವುದೇ ಕಾರಣಕ್ಕೂ ದೇಶದ ಹಿತಾಸಕ್ತಿ ವಿಚಾರದಲ್ಲಿ ರಾಜೀಯಾಗಲ್ಲ'' ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲೇ ಮೋದಿಯವರು, ''ನಾನು ನಿಮಗೆ ಮೂರು ವಿಷಯಗಳನ್ನು ಹೇಳಬೇಕಿದೆ. ಮೊದಲನೆಯದಾಗಿ ನೀವು ಹೊಸ ಕೌಶಲ್ಯಗಳನ್ನು ಕಲಿಯುವುದನ್ನು ಮುಂದುವರಿಸಬೇಕು. ಎರಡನೆಯದಾಗಿ ಯೋಗಾಭ್ಯಾಸ ಮಾಡಬೇಕು. ಮೂರನೇಯದಾಗಿ ನೀವು ನಿಮ್ಮ ಮಾತೃಭಾಷೆ ಮತ್ತು ಇಂಗ್ಲಿಷ್ ಹೊರತುಪಡಿಸಿ ಹೆಚ್ಚಿನ ಭಾಷೆಯನ್ನು ಕಲಿಯಬೇಕು ಎಂದು ಹೇಳಿದ್ದು ಇದು ನಿಮ್ಮ ದೃಷ್ಟಿಕೋನ ಬೆಳವಣಿಗೆಗೆ ಸಹಕಾರಿ'' ಎಂದು ಯೋಧರಿಗೆ ತಿಳಿಸಿದರು.
''ಭಾರತದಲ್ಲಿ ಗಡಿಗಳು ಹಲವಿದ್ದರು ಎಲ್ಲಾ ಭಾರತೀಯರಿಗೂ ನೆನಪಾಗುವುದು ಲೋಂಗೇವಾಲ್. ಲೋಂಗೇವಾಲ್ ಯುದ್ದ ನೆನಪಾದಾಗಲೆಲ್ಲಾ 'ಜೋ ಬೋಲೆ ಸೋ ನಿಹಾಲ್, ಸತ್ ಶ್ರೀ ಅಕಾಲ್' ನೆನಪಾಗುತ್ತದೆ'' ಎಂದರು.
ಹಾಗೆಯೇ ಯೋಧರಿಗೆ ಸಿಹಿ ತಿಂಡಿ ಹಂಚಿದ ಅವರು, ''ನಿಮಗಾಗಿ ಸಿಹಿ ತಿಂಡಿ ತಂದಿದ್ದೇನೆ. ಇದು ಬರೀ ನನ್ನಿಂದ ಅಲ್ಲ ಬದಲಾಗಿ 130 ಕೋಟಿ ಭಾರತೀಯರು ನಿಮಗೆ ನೀಡುವ ಸಿಹಿ ತಿಂಡಿ'' ಎಂದು ಹೇಳಿದರು.