ನವದೆಹಲಿ, ನ.14 (DaijiworldNews/PY): 2024ರ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುವ ಉದ್ದೇಶದಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಬಿಜೆಪಿ ರಾಷ್ಟ್ರೀಯ ನಾಯಕ ಜೆ.ಪಿ.ನಡ್ಡಾ ಅವರು ದೇಶಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಲು ತೀರ್ಮಾನ ಕೈಗೊಂಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಜಯ ಗಳಿಸಿದ ನಂತರ ವಿಶ್ರಾಂತಿ ಪಡೆಯದ ನಡ್ಡಾ ಶೀಘ್ರದಲ್ಲೇ ದೇಶಾದ್ಯಂತ 100 ದಿನಗಳ 'ರಾಷ್ಟ್ರೀಯ ವಿಸ್ತೃತ್ ಪ್ರವಾಸವನ್ನು ಕೈಗೊಂಡಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುವ ಕಾರ್ಯಕ್ಕಾಗಿ ಅವರು ರಾಜ್ಯದಲ್ಲಿ ಉಳಿದುಕೊಳ್ಳಲು ದಿನಗಳನ್ನು ವಿಂಗಡಣೆ ಮಾಡಿದ್ದಾರೆ.
2019ರಲ್ಲಿ ಪಕ್ಷವು ಗೆಲ್ಲದ ಸ್ಥಾನಗಳ ಮೇಲೆ ಕಾರ್ಯ ನಿರ್ವಹಿಸುವುದು ಹಾಗೂ 2024ರಲ್ಲಿ ಆ ಸ್ಥಾನಗಳನ್ನು ಹೇಗೆ ಗೆಲ್ಲುವುದು ಎಂಬುದರ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಮುಖ್ಯಸ್ಥರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ನಡ್ಡಾ ಅವರನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದರು. ಪಕ್ಷದ ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡುವುದು, ಹೊಸ ಸಂಭಾವ್ಯ ಒಕ್ಕೂಟಗಳ ಬಗ್ಗೆ ಚರ್ಚಿಸುವುದು ಮುಂತಾದ ಕಾರ್ಯಗಳನ್ನು ಮಾಡಲು ನಡ್ಡಾ ತೀರ್ಮಾನ ಕೈಗೊಂಡಿದ್ದಾರೆ.
ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಹಾಗೂ ಅದರ ಗುರಿ ತಲುಪಲು ತಂಡಗಳನ್ನು ರಚಿಸುವುದು, ಪಕ್ಷಕ್ಕೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ವಿವರವಾದ ವರದಿಯನ್ನು ನೀಡುವುದು ಮತ್ತು ವಿವಿಧ ಚಟುವಟಿಕೆಗಳಲ್ಲಿ ಏಕರೂಪತೆಯನ್ನು ತರುವ ಕಾರ್ಯವನ್ನು ಮಾಡಲಿದ್ದಾರೆ.
ಕೊರೊನಾ ಇರುವ ಕಾರಣ, ನಡ್ಡಾ ಅವರ ಪ್ರವಾಸದ ಸಮಯದಲ್ಲಿ, ದೊಡ್ಡ ಸಭಾಂಗಣದಲ್ಲಿ 200ಕ್ಕೂ ಅಧಿಕ ಮಂದಿಯನ್ನು ಒಗ್ಗೂಡಿಸದಂತೆ ಮನವಿ ಮಾಡಲಾಗಿದೆ.
ಸಭೆಯ ಕಾರ್ಯಕ್ರಮ ನಡೆಸುವ ಸಂದರ್ಭ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.