ನವದೆಹಲಿ, ನ.14 (DaijiworldNews/PY): ಬಿಹಾರ ಚುನಾವಣೆ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಗಳ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬಿಜೆಪಿ ಇತ್ತೀಚೆಗೆ ಪಕ್ಷದ ಸಂಘಟನಾ ಮುಖ್ಯಸ್ಥರ ಹುದ್ದೆಗಳನ್ನು ಬದಲಾಯಿಸಿತ್ತು. ಇದೀಗ ರಾಜ್ಯ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ಬದಲಾವಣೆ ಮಾಡಿದೆ.
ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಅರುಣ ಸಿಂಗ್ ಅವರನ್ನು ನೇಮಿಸಲಾಗಿದೆ. ಸಹ ಉಸ್ತುವಾರಿಯಾಗಿ ಡಿ.ಕೆ. ಅರುಣಾ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಇತ್ತೀಚೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪಕ್ಷದ ರಾಜ್ಯ ಮುಖಂಡ ಸಿ.ಟಿ. ರವಿ ಅವರಿಗೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ.
ಪುದುಚೇರಿಗೆ ಮುಖಂಡ ನಿರ್ಮಲಕುಮಾರ್ ಸುರಾನಾ ಅವರನ್ನು ನಿಯೋಜನೆ ಮಾಡಲಾಗಿದೆ. ಈವರೆಗೆ ಪಿ.ಮುರುಳೀಧರ ರಾವ್ ಅವರು ರಾಜ್ಯದ ಉಸ್ತುವಾರಿಯಾಗಿದ್ದು, ಇದೀಗ ಅವರಿಗೆ ಮಧ್ಯಪ್ರದೇಶದ ಹೊಣೆ ನೀಡಲಾಗಿದೆ.
ಈ ಹಿಂದೆ ಅಮಿತ್ ಮಾಳವೀಯ ಅವರು ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದು, ಇದೀಗ ಅವರನ್ನು ಪಶ್ಚಿಮ ಬಂಗಾಳದ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಮಣಿಪುರ ಉಸ್ತುವಾರಿಯನ್ನು ಸಂಬಿತ್ ಪಾತ್ರಾ ಅವರಿಗೆ ವಹಿಸಲಾಗಿದ್ದು, ಅಸ್ಸಾಂ ಉಸ್ತುವಾರಿಯನ್ನು ಬೈಜಯಂತ್ ಪಾಂಡಾ ಅವರಿಗೆ ವಹಿಸಲಾಗಿದೆ.
ಇನ್ನು ಉತ್ತರಪ್ರದೇಶದ ಸಹ ಉಸ್ತುವಾರಿಗಳನ್ನಾಗಿ ಸತ್ಯಕುಮಾರ್, ಸುನೀಲ್ ಓಜಾ, ಸಂಜೀವ್ ಚೌರಾಸಿಯಾ ಅವರನ್ನು ನೇಮಿಸಲಾಗಿದೆ. ಡಿಶಾ ಹಾಗೂ ಛತ್ತೀಸ್ಗಢದ ಉಸ್ತುವಾರಿಯನ್ನು ಡಿ.ಪುರಂದರೇಶ್ವರಿ ಅವರಿಗೆ ವಹಿಸಲಾಗಿದೆ.
ಪಂಜಾಬ್, ಚಂಡೀಗಢದ ಹೋನೆಯ ಉಸ್ತುವಾರಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ನೋಡಿಕೊಳ್ಳಲಿದ್ದಾರೆ. ಜಾರ್ಖಂಡ್ ಹಾಗೂ ಅರುಣಾಚಲ ಪ್ರದೇಶದ ಉಸ್ತುವಾರಿಯಾಗಿ ದಿಲೀಪ್ ಸಾಕಿಯಾ ಅವರನ್ನು ನೇಮಿಸಲಾಗಿದೆ.