ಧಾರವಾಡ, ನ.13 (DaijiworldNews/PY): "ಶಾಸಕರ ಸಭೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಶಾಸಕರ ಸಭೆಗಳಿಗೆ ಹಾಗೂ ಸಚಿವ ಸಂಪುಟಕ್ಕೆ ಯಾವುದೇ ರೀತಿಯಾದ ಸಂಬಂಧವಿಲ್ಲ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆಯ ವಿಚಾರವನ್ನು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹುಬ್ಬಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಇತ್ತೀಚೆಗೆ ಸಭೆ ನಡೆದಿತ್ತು. ಈ ಸಭೆಯನ್ನು ಕೂಡಾ ರಹಸ್ಯ ಎಂದು ಹೇಳುತ್ತಿದ್ದರು. ಆದರೆ, ಅದೆಲ್ಲಾ ಏನು ಇಲ್ಲ. ಸುಖಾ ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾರೆ. ಸದ್ಯ ನಡೆಯುತ್ತಿರುವ ಸಭೆಗೂ ಹಾಗೂ ಸಂಪುಟ ವಿಸ್ತರಣೆಗೆ ಯಾವುದೇ ರೀತಿಯಾದ ಸಂಬಂಧವಿಲ್ಲ" ಎಂದಿದ್ದಾರೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಷಡ್ಯಂತ್ರ ಎಂಬ ಆರೋಪದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ತನ್ನ ಕಾರ್ಯವನ್ನು ಕಾನೂನು ಮಾಡುತ್ತಿದೆ. ನಮ್ಮ ಕೈವಾಡ ಇದೆ ಎಂದು ಕೆಲವರು ಸುಮ್ಮನೆ ಆರೋಪಿಸಿದ್ದಾರೆ. ಅವರಿಗೆ ದೇವರು ಸದ್ಭುದ್ಧಿ ಕರುಣಿಸಲಿ" ಎಂದು ತಿಳಿಸಿದ್ದಾರೆ.