ನವದೆಹಲಿ, ನ. 13 (DaijiworldNews/MB) : ಪಾಕಿಸ್ತಾನದ ಪಡೆಗಳು ಶುಕ್ರವಾರ ಮತ್ತೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು ಪಾಕ್ ದಾಳಿಯಿಂದಾಗಿ ಬಿಎಸ್ಎಫ್ನ ಸಬ್ಇನ್ಸ್ಪೆಕ್ಟರ್ ಒಬ್ಬರು ಹುತಾತ್ಮರಾಗಿದ್ದಾರೆ ಎಂದು ವರದಿ ತಿಳಿಸಿದೆ.
''ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆಯು ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭ ಬಾರಾಮುಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಸಬ್ಇನ್ಸ್ಪೆಕ್ಟರ್ ರಾಕೇಶ್ ದೋವಲ್ ಸಾವನ್ನಪ್ಪಿದ್ದು ಮತ್ತೋರ್ವ ಯೋಧರೊಬ್ಬರ ತಲೆಗೆ ಗಂಭೀರ ಗಾಯವಾಗಿದೆ. ಇನ್ನೋರ್ವ ಯೋಧ ವಾಸುರಾಜಾ ಎಂಬವರಿಗೂ ಗಾಯವಾಗಿದೆ ಎಂದು ಅಧಿಕಾರಿಯೊಬ್ಬರು'' ಮಾಹಿತಿ ನೀಡಿದ್ದಾರೆ.
ಹುತಾತ್ಮ ಬಿಎಸ್ಎಫ್ನ ಸಬ್ಇನ್ಸ್ಪೆಕ್ಟರ್ ರಾಕೇಶ್ ಉತ್ತರಾಖಂಡ ನಿವಾಸಿ ಎಂದು ವರದಿಯಾಗಿದೆ.
ಇನ್ನು, ''ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡಿನ ದಾಳಿ ನಡೆಯುತ್ತಲ್ಲೇ ಇದ್ದು ಬಿಎಸ್ಎಫ್ ಯೋಧರು ಕೂಡಾ ಪಾಕ್ ಸೇನೆಯ ದಾಳಿಗೆ ಪ್ರತಿದಾಳಿ ನಡೆಸಿದ್ದಾರೆ'' ಎಂದು ಅಧಿಕಾರಿಗಳು ಹೇಳಿದ್ದಾರೆ.