ನವದೆಹಲಿ, ನ. 13 (DaijiworldNews/MB) : ''ಸುಪ್ರೀಂಕೋರ್ಟ್ ಕಾರ್ಯವೈಖರಿ ಟೀಕಿಸಿರುವ ಟ್ವೀಟ್ಗಳನ್ನು ಡಿಲೀಟ್ ಮಾಡುವುದಿಲ್ಲ. ನಾನು ಈ ಬಗ್ಗೆ ಕ್ಷಮೆ ಕೂಡಾ ಯಾಚಿಸುವುದಿಲ್ಲ'' ಎಂದು ನ್ಯಾಯಾಂಗ ನಿಂದನೆಗೆ ಆರೋಪಕ್ಕೆ ಗುರಿಯಾಗಿರುವ ಸ್ಟಾಂಡ್ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಸ್ಪಷ್ಟನೆ ನೀಡಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧನಕ್ಕೆ ಒಳಪಟ್ಟಿದ್ದ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಬಗ್ಗೆ ಕಾಮ್ರಾ ಟ್ವೀಟ್ ಮಾಡಿ ಟೀಕಿಸಿದ್ದರು.
''ಕಾಮ್ರಾ ಅವರು ತಮಾಷೆಯ ಗೆರೆಯನ್ನು ದಾಟಿದ್ದಾರೆ'' ಎಂದು ಹೇಳಿದ್ದ ಅಟಾರ್ನಿ ಜನರಲ್ ವೇಣುಗೋಪಾಲ್, ಕಾಮ್ರಾ ವಿರುದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು 8 ಮಂದಿಗೆ ಅವಕಾಶ ನೀಡಿದ್ದರು.
ಈ ಬಗ್ಗೆ ವೇಣುಗೋಪಾಲ್ ಅವರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಾಮ್ರಾ, ''ವಕೀಲರಿಲ್ಲ, ಕ್ಷಮೆಯಾಚನೆ ಇಲ್ಲ, ದಂಡ ಕಟ್ಟಲ್ಲ, ಜಾಗ ವ್ಯರ್ಥ ಮಾಡಲ್ಲ'' ಎಂದು ಹೇಳಿದ್ದಾರೆ.
ಹಾಗೆಯೇ ''ನಾನು ಇತ್ತೀಚೆಗೆ ಮಾಡಿದ ಟ್ವೀಟ್ನ್ನು ನ್ಯಾಯಾಂಗ ನಿಂದನೆ ಎಂದು ಹೇಳಲಾಗಿದೆ. ನಾನು ಟ್ವೀಟ್ ಮಾಡಿರುವುದು ಸುಪ್ರೀಂ ಕೋರ್ಟ್ ಪ್ರೈಮ್ ಟೈಮ್ ಲೌಡ್ ಸ್ಪೀಕರ್ನ ಪರವಾಗಿ ನೀಡಿದ ತಾರತಮ್ಯದ ತೀರ್ಪಿನ ಬಗ್ಗೆ'' ಎಂದು ಹೇಳಿದ್ದಾರೆ.
''ಈ ಬಗ್ಗೆ ನನ್ನ ದೃಷ್ಟಿಕೋನ ಬದಲಾಗುವುದಿಲ್ಲ. ನಾನು ಈ ಟ್ವೀಟ್ನ್ನು ಅಳಿಸುವುದಿಲ್ಲ ಹಾಗೂ ಕ್ಷಮೆಯಾಚಿಸುವುದಿಲ್ಲ. ಅವು ತಮ್ಮಷ್ಟಕ್ಕೆ ಏನು ಹೇಳಬೇಕೋ ಅದನ್ನು ಹೇಳುತ್ತವೆ'' ಎಂದಿದ್ದಾರೆ.