ನವದೆಹಲಿ, ನ. 13 (DaijiworldNews/MB) : ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಸುವ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು ಹಬ್ಬದ ಈ ಸಂದರ್ಭದಲ್ಲಿ ಗ್ರಾಹಕರಿಗೆ ಕೊಡುಗೆ ನೀಡುವ ಅವಕಾಶವನ್ನು ಕಳೆದುಕೊಂಡಂತೆ ಕಾಣುತ್ತಿದೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ಕುಸಿಯುತ್ತಿರುವ ದಾಸ್ತಾನುಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಜಾಗತಿಕ ತೈಲ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಇಂಧನ ಬೆಲೆ ಇನ್ನಷ್ಟು ಅಧಿಕವಾಗುವ ಸಾಧ್ಯತೆಯಿದೆ.
ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಿಲ್ಲ. ಈ ಪ್ರಕಾರವಾಗಿ ಪೆಟ್ರೋಲ್ ಬೆಲೆ ಈಗ 52 ದಿನಗಳಿಂದ ಅದೇ ಮಟ್ಟದಲ್ಲಿ ಉಳಿದಿದ್ದರೆ ಡೀಸೆಲ್ ಬೆಲೆ 42 ದಿನದಿಂದ ಅದೇ ಮಟ್ಟದಲ್ಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 81.06 ರೂ. ಇದ್ದು ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಇಂಧನ ಬೆಲೆಯು ಲೀಟರ್ಗೆ ಕ್ರಮವಾಗಿ 87.74, 84.14 ಮತ್ತು 82.59 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಕ್ರಮವಾಗಿ 70.46, 76.86, 75.95 ಮತ್ತು 73.99 ರೂ. ಇದೆ.
ಕಳೆದ 52 ದಿನಗಳಲ್ಲಿ ಬ್ರೆಂಟ್ ಕಚ್ಚಾ ಬೆಲೆ ಬ್ಯಾರೆಲ್ಗೆ $ 2-3 ರಷ್ಟು ಇಳಿಕೆಯಾಗಿದ್ದು ಬ್ಯಾರೆಲ್ಗೆ $ 40 ಕ್ಕೆ ಸಮೀಪದಲ್ಲಿದೆ. ಅದು ಸಾಮಾನ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ಗೆ ಬೆಲೆ ಕಡಿತಕ್ಕೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ.
ಕಚ್ಚಾ ಬೆಲೆ ದರವು ಗುರುವಾರ ಬ್ಯಾರೆಲ್ಗೆ $ 44 ಕ್ಕಿಂತ ಅಧಿಕವಾಗಿದೆ. ಪ್ರಸ್ತುತ ಬ್ಯಾರೆಲ್ಗೆ $ 43 ರಷ್ಟಿದೆ. ಕಚ್ಚಾ ಬೆಲೆ ದರವು ಇದೇ ಮಟ್ಟದಲ್ಲಿದ್ದರೆ ಅಥವಾ ಇನ್ನಷ್ಟು ಹೆಚ್ಚಳವಾದರೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಅಧಿಕವಾಗಿದೆ.
ಇನ್ನು ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಎಸ್ಯು ತೈಲ ಕಂಪನಿಯ ಕಾರ್ಯನಿರ್ವಾಹಕ, "ಜಾಗತಿಕವಾಗಿ ಪೆಟ್ರೋಲಿಯಂ ಉತ್ಪನ್ನದ ಬೆಲೆಗಳು ಗಂಟೆಗೊಮ್ಮೆ ಪರಿಷ್ಕರಿಸಲ್ಪಡುತ್ತವೆ. ನಾವು ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯವಿಧಾನವನ್ನು ಪ್ರಾರಂಭಿಸಿದ್ದೇವೆ. ಆಡಳಿತ ವ್ಯವಸ್ಥೆಯು ಕಂಪನಿಗಳು ದೀರ್ಘಾವಧಿಯವರೆಗೆ ಯಾವುದೇ ಪರಿಷ್ಕರಣೆಯನ್ನು ತಡೆಹಿಡಿಯಬಹುದಾಗಿದೆ'' ಎಂದು ಹೇಳಿದ್ದಾರೆ.
ಭಾರತೀಯ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯವಿಧಾನವನ್ನು ಅನುಸರಿಸುತ್ತಿವೆ. ಇದರ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ ಪರಿಷ್ಕರಿಸಲಾಗುತ್ತದೆ. ಆದರೆ ದೀರ್ಘಾವಧಿಯಿಂದ ಯಾವುದೇ ಪರಿಷ್ಕರಣೆ ಮಾಡಿಲ್ಲ.