ಬೆಂಗಳೂರು, ನ. 13 (DaijiworldNews/MB) : ರಾಜ್ಯದಲ್ಲೀಗ ಕೊರೊನಾ ಭೀತಿ ಕಾಡುತ್ತಿರುವುದರಿಂದ ಪ್ರಸ್ತುತ ಶಾಲೆಗಳನ್ನು ತೆರೆಯುವ ಅಗತ್ಯವಿಲ್ಲ ಎಂದು ರಾಜ್ಯ ಸಂಪುಟ ಸಭೆಯಲ್ಲಿ ಹಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ನವೆಂಬರ್ 12 ರ ಗುರುವಾರ ಇಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಈ ವಿಷಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವ ಅವಶ್ಯಕತೆಯಿದೆ. ಯಾವುದೇ ಆತುರ ಪಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಾಗೆಯೇ ಎಲ್ಲಾ ಸಚಿವರು ಈ ಬಗ್ಗೆ ದೃಢವಾಗಿದ್ದರು ಎಂದು ವರದಿಯಾಗಿದೆ.
ಕೊರೊನಾ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚಿ ಏಳು ತಿಂಗಳಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಶಿಕ್ಷಣ ತಜ್ಞರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸದಸ್ಯರು, ಶಿಕ್ಷಕರು, ಶಿಕ್ಷಕ ಸಂಸ್ಥೆಗಳ ಮುಖಂಡರು, ಖಾಸಗಿ ಶಾಲೆಗಳ ಮುಖ್ಯಸ್ಥರು, ಪೋಷಕರು ಮುಂತಾದವರನ್ನು ಭೇಟಿ ಮಾಡಿದೆ. ಕೊರೊನಾ ಕಾರಣದಿಂದಾಗಿ ಶಾಲೆಗಳನ್ನು ತೆರೆಯಲು ಸಭೆಯಲ್ಲಿ ಒಮ್ಮತವಿರಲಿಲ್ಲ. ಶಾಲೆಯನ್ನು ತೆರೆಯುವ ಬಗ್ಗೆ ಕೆಲವು ಸಚಿವರು ಪ್ರಸ್ತಾಪ ಮಾಡಿದ್ದು ಆದರೆ ಈ ಸಂದರ್ಭದಲ್ಲಿ ಶಾಲೆ ತೆರೆಯುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಹಲವು ಸಚಿವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಕೊರೊನಾ ಸೋಂಕಿನ ಹಿನ್ನೆಲೆ ಕಳೆದ ಕೆಲವು ತಿಂಗಳಿನಿಂದ ಮುಚ್ಚಿರುವ ಇಂಜನಿಯರ್, ಡಿಪ್ಲೊಮಾ, ಪಿಜಿ, ಪದವಿ ಕಾಲೇಜುಗಳನ್ನು ನವೆಂಬರ್ 17ರಿಂದ ಮತ್ತೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಇತ್ತೀಚೆಗೆ ಮಾರ್ಗಸೂಚಿ ಹೊರಡಿಸಿದೆ.