ನವದೆಹಲಿ, ನ. 13 (DaijiworldNews/MB) : ಪಾಕಿಸ್ತಾನವು ಮುಂಬೈ ದಾಳಿಯಲ್ಲಿ ಭಾಗಿಯಾದವ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಈ ದಾಳಿಗೆ ಷಡ್ಯಂತ್ರ ನಡೆಸಿದ ಪ್ರಮುಖ ಆರೋಪಿಗಳ ಹೆಸರುಗಳ ಉಲ್ಲೇಖ ಮಾಡಿಲ್ಲ ಎಂದು ಹೇಳಿರುವ ಭಾರತವು ಪಾಕಿಸ್ತಾನದ ಈ ಉಗ್ರರ ಪಟ್ಟಿಯನ್ನು ತಿರಸ್ಕರಿಸಿದೆ.
ಈ ಪಟ್ಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, ಪಾಕಿಸ್ತಾನವೇ ಷಡ್ಯಂತ್ರ ರಚಿಸಿ ಈ ಉಗ್ರ ದಾಳಿ ನಡೆಸಿದೆ. ಈ ಸಂಚುಕೋರರ ಎಲ್ಲಾ ಮಾಹಿತಿ ಹಾಗೂ ಸಾಕ್ಷ್ಯಗಳು ಪಾಕಿಸ್ತಾನವೇ ಷಡ್ಯಂತ್ರ ರೂಪಿಸಿದೆ ಎಂಬುದನ್ನು ಆ ಪಟ್ಟಿ ಸಾಬೀತು ಪಡಿಸುತ್ತದೆ. ಆದರೆ ಪಾಕಿಸ್ತಾನವು ಈ ರೀತಿಯ ತಂತ್ರಗಳನ್ನು ಕೈಬಿಡಬೇಕು ಎಂದು ಭಾರತ ಆಗಾಗೇ ಹೇಳುತ್ತಲೇ ಬಂದಿದೆ ಎಂದಿದ್ದಾರೆ.
ಪಾಕಿಸ್ತಾನ ರಚಿಸಿದ ಈ ಪಟ್ಟಿಯಲ್ಲಿ ಎಲ್ಇಟಿಯ ಕೆಲವು ಸದಸ್ಯರ ಹೆಸರು ಇದೆ. ಹಾಗೆಯೇ ದಾಳಿಗೆ ಬಳಸಲಾದ ಹಡಗಿನ ಸಿಬ್ಬಂದಿಯ ಹೆಸರು ಕೂಡಾ ಇದೆ. ಆದರೆ ದಾಳಿಗೆ ಷಡ್ಯಂತ್ರ ಮಾಡಿದವರ ಹೆಸರು ಮಾತ್ರ ಇಲ್ಲ. ಪಾಕಿಸ್ತಾನ ಬೇಕೆಂದೇ ಆ ಹೆಸರನ್ನು ಉಲ್ಲೇಖಿಸಿಲ್ಲ. ಇನ್ನು ಈ ದಾಳಿ ನಡೆದು 12 ವರ್ಷಗಳಾಗಿದ್ದರೂ ಪಾಕಿಸ್ತಾನ ಸಂತ್ರಸ್ತ ಕುಟುಂಬಸ್ಥರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಯತ್ನ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನವು 1,210 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 12 ವರ್ಷಗಳ ಹಿಂದೆ ನಡೆದ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾದ 19 ಉಗ್ರರ ಹೆಸರೂ ಕೂಡಾ ಇದೆ ಎಂದು ವರದಿ ತಿಳಿಸಿದೆ.
ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 28 ಮಂದಿ ವಿದೇಶಿ ಪ್ರಜೆಗಳು ಸೇರಿ 166 ಮಂದಿ ಮೃತಪಟ್ಟಿದ್ದರು.