ನವದೆಹಲಿ, ನ.13 (DaijiworldNews/PY): ಕೇಂದ್ರ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಂದ ಪ್ರವಾಹದಿಂದ ತತ್ತರಿಸಿ ಹೋಗಿರುವ ಕರ್ನಾಟಕದ ಸಂತ್ರಸ್ತರ ನೆರವಿಗಾಗಿ 577.84 ಕೋಟಿ. ರೂ.ಗಳನ್ನು ಮುಂಗಡ ಪರಿಹಾರವಾಗಿ ಮಂಜೂರು ಮಾಡಿದೆ.
ಸಾಂದರ್ಭಿಕ ಚಿತ್ರ
ಶುಕ್ರವಾರ ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಚರ್ಚೆ ನಡೆದ ನಂತರ, ಕರ್ನಾಟಕವನ್ನು ಹೊರತುಪಡಿಸಿ ಇತರ ಐದು ರಾಜ್ಯಗಳಿಗೂ ಕೂಡಾ ನೈಸರ್ಗಿಕ ವಿಕೋಪ ಪರಿಹಾರ ಕಲ್ಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಅಂಫಾನ್ ಚಂಡಮಾರುತ ಅಪ್ಪಳಿಸಿದ ಪರಿಣಾಮ ತತ್ತರಿಸಿಹೋಗಿರುವ ಪಶ್ಚಿಮ ಬಂಗಾಳಕ್ಕೆ 2707.77 ಹಾಗೂ ಒಡಿಶಾ ರಾಜ್ಯಗಳಿಗೆ 128.33 ಕೋಟಿ ಕಲ್ಪಿಸಿರುವ ಸಮಿತಿಯು, ಮಧ್ಯಪ್ರದೇಶಕ್ಕೂ ಕೂಡಾ 611.61 ಕೋಟಿ ನೀಡಲು ನಿರ್ಧರಿಸಿದೆ.
ಪ್ರವಾದ ಸಂಕಷ್ಟಕ್ಕೆ ಸಿಲುಕಿರುವ ಮಹಾರಾಷ್ಟ್ರ ಸೇರಿದಂತೆ ಸಿಕ್ಕಿಂ ರಾಜ್ಯಗಳಿಗೂ ಕೂಡಾ ಪರಿಹಾರ ಮಂಜೂರು ಮಾಡಲಾಗಿದೆ. ಅಲ್ಲದೇ, ಎಲ್ಲಾ ರಾಜ್ಯಗಳಿಗೂ ಸೇರಿದಂತೆ ಒಟ್ಟು ಸುಮಾರು 4381.88 ಕೋಟಿ. ರೂ.ಗಳನ್ನು ನೀಡಲಾಗುತ್ತಿದೆ.
ಪ್ರಸಕ್ತ ಸಾಲಿನ ರಾಜ್ಯಗಳ ನೈಸರ್ಗಿಕ ವಿಪತ್ತು ಪರಿಹಾರ ನಿಧಿ ಅಡಿ ಒಟ್ಟು 15,524.43 ಕೋಟಿ ಪರಿಹಾರವನ್ನು ಎಲ್ಲಾ 28 ರಾಜ್ಯಗಳಿಗೆ ಕಲ್ಪಿಸಲಾಗಿದೆ.