ಬೆಂಗಳೂರು, ನ. 13 (DaijiworldNews/MB) : ಕೊರೊನಾ ಸಾಂಕ್ರಾಮಿಕ ತಡೆಗಟ್ಟಲು ಪಟಾಕಿ ನಿಷೇಧಕ್ಕೆ ಆದೇಶ ಹೊರಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನವೆಂಬರ್ 12 ರ ಗುರುವಾರ ರಾಜ್ಯ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹಸಿರು ಪಟಾಕಿಗಳು ಯಾವುವು ಎಂಬುದನ್ನು ಸರಿಯಾಗಿ ವಿವರಿಸುವ ಸ್ಪಷ್ಟ ಆದೇಶವನ್ನು ಹೊರಡಿಸಲು ಮತ್ತು ಶುಕ್ರವಾರ ಬೆಳಿಗ್ಗೆ ಈ ವಿಷಯದ ಬಗ್ಗೆ ನ್ಯಾಯಾಲಯಕ್ಕೆ ತನ್ನ ಸ್ಪಷ್ಟ ನಿಲುವನ್ನು ತಿಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಎಲ್ಲಾ ರೀತಿಯ ಪಟಾಕಿಗಳನ್ನು ನಿಷೇಧಿಸುವಂತೆ ಕೋರಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಡಾ.ಎ.ಎಸ್.ವಿಷ್ಣು ಭಾರತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆಗೆತ್ತಿಕೊಂಡಿದೆ.
ಸರ್ಕಾರದ ಪರವಾಗಿ ಹಾಜರಾಗಿದ್ದ ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ, ''ನವೆಂಬರ್ 6 ರಂದು ಮತ್ತು ನವೆಂಬರ್ 10 ರಂದು ಎರಡು ಆದೇಶಗಳನ್ನು ಸರ್ಕಾರ ಹೊರಡಿಸಿದೆ. ಮೊದಲ ಆದೇಶದಲ್ಲಿ ಪಟಾಕಿಗಳ ಬಗ್ಗೆ ಮಾರ್ಗಸೂಚಿಗಳನ್ನು ಉಲ್ಲೇಖಿಸಲಾಗಿತ್ತು ಹಾಗೂ ಎರಡನೆ ಆದೇಶದಲ್ಲಿ ಹಸಿರು ಪಟಾಕಿಗಳ ಬಳಕೆಯನ್ನು ಮಾತ್ರ ಅನುಮತಿಸಲಾಗಿದೆ'' ಎಂದು ಸ್ಪಷ್ಟಪಡಿಸಿದರು.
"ಎರಡೂ ಆದೇಶಗಳಲ್ಲಿ ಸ್ಪಷ್ಟತೆಯ ಕೊರತೆಯಿದೆ ಮತ್ತು ಆದೇಶಗಳು ಅರ್ಥಹೀನವಾಗಿವೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
"ಹಸಿರು ಪಟಾಕಿಗಳು ಯಾವುವು ಎಂದು ಆದೇಶವು ಸ್ಪಷ್ಟಪಡಿಸಿಲ್ಲ. ಹಸಿರು ಪಟಾಕಿಗಳು ಯಾವುವು ಎಂದು ಜನರು ನಿರ್ಧರಿಸಬೇಕೇ? ಅದನ್ನು ನಿರ್ಧರಿಸಲು ನೀವು ಅವರಿಗೆ ಉಚಿತ ಪರವಾನಗಿ ನೀಡುತ್ತೀರಾ? ಹಸಿರು ಪಟಾಕಿಗಳ ಹೆಸರಿನಲ್ಲಿ ಇತರ ಪಟಾಕಿಗಳನ್ನು ಮಾರಾಟ ಮಾಡಲಾಗಿದೆಯೇ ಎಂದು ಕಂಡುಹಿಡಿಯುವುದು ಹೇಗೆ?" ಎಂದು ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಶುಕ್ರವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಸ್ಪಷ್ಟ ಆದೇಶದ ಪ್ರತಿ ನೀಡುವಂತೆ ಸರ್ಕಾರಕ್ಕೆ ನ್ಯಾಯಾಧೀಶರು ತಿಳಿಸಿದ್ದಾರೆ.
"ಪಟಾಕಿ ಸಿಡಿಸುವುದರಿಂದ ಹೆಚ್ಚಿನ ಪ್ರಮಾಣದ ವಾಯುಮಾಲಿನ್ಯವಾಗುತ್ತದೆ. ಈ ಮಾಲಿನ್ಯವು ಕೊರೊನಾ ಸೋಂಕು ಹರಡಲು ದಾರಿ ಮಾಡಿಕೊಡಬಹುದು. ಅರ್ಜಿಯನ್ನು ಸಾಕಷ್ಟು ಮುಂಚಿತವಾಗಿ ಸಲ್ಲಿಸಿದ್ದರೆ, ನಾವು ಬಲವಾದ ಆದೇಶಗಳನ್ನು ನೀಡುತ್ತಿದ್ದೆವು. ಈ ಗೊಂದಲಗಳ ವಿಚಾರವಾಗಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನಾವು ಎಲ್ಲ ಪಟಾಕಿಯನ್ನು ನಿಷೇಧಿಸಬೇಕಾಗಬಹುದು" ಎಂದು ನ್ಯಾಯಪೀಠ ಎಚ್ಚರಿಸಿದೆ.
ವಾಯುಮಾಲಿನ್ಯವನ್ನು ಅಳೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನ್ಯಾಯಪೀಠ ತಿಳಿಸಿದೆ.