ನವದೆಹಲಿ, ನ. 13 (DaijiworldNews/MB) : ''ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪತ್ರಿಕೋದ್ಯಮದ ಕತ್ತು ಹಿಸುಕಲಾಗುತ್ತಿದೆ'' ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ''ಟಿನ್ಸುಕಿಯಾ ಜಿಲ್ಲೆಯ ಹಿರಿಯ ಗ್ರಾಮೀಣ ಪತ್ರಕರ್ತ ಪರಾಗ್ ಭುಯಾನ್ ಅವರನ್ನು ಬಿಜೆಪಿ ನಾಯಕರ ಭ್ರಷ್ಟಾಚಾರ ಬಯಲಿಗೆಳೆದ ಕಾರಣಕ್ಕೆ ಕೊಲೆ ಮಾಡಲಾಗಿದೆ'' ಎಂದು ಆರೋಪಿಸಿದ್ದಾರೆ.
ಹಿರಿಯ ಪತ್ರಕರ್ತ ಪರಾಗ್ ಭುಯಾನ್ ಟಿನ್ಸುಕಿಯಾ ಜಿಲ್ಲೆಯಲ್ಲಿ ಅವರ ನಿವಾಸದ ಬಳಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಅವರು ಕೆಲ ನಾಯಕರ ಭ್ರಷ್ಟಾಚಾರದ ಬಗ್ಗೆ ಹಲವಾರು ಸುದ್ದಿಗಳನ್ನು ಮಾಡಿದ ಕಾರಣ ಇದಕ್ಕೂ ಮುನ್ನ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು ಈ ಅಪಘಾತ ಆಕಸ್ಮಿಕವಲ್ಲ ಕೊಲೆ ಎಂದು ಹೇಳಲಾಗಿದೆ.
ಟ್ವೀಟ್ ಮೂಲಕ ಪರಾಗ್ ಕುಟುಂಬಸ್ಥರಿಗೆ ಸಂತಾಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿಯವರು, ''ಬಿಜೆಪಿ ನಾಯಕರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಅಸ್ಸಾಂ ಪತ್ರಕರ್ತ ಪರಾಗ್ ಭೂಯಾನ್ ಅವರನ್ನು ಅನುಮಾನಾಸ್ಪದವಾಗಿ ಹತ್ಯೆಗೈಯಲಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು'' ಎಂದು ಹೇಳಿದ್ದಾರೆ.
ಹಾಗೆಯೇ, ''ಅಸ್ಸಾಂ, ಮಧ್ಯಪ್ರದೇಶ ಅಥವಾ ಯುಪಿ, ಬಿಜೆಪಿ ಆಳುವ ರಾಜ್ಯಗಳಲ್ಲಿ ನಿಜವಾದ ಪತ್ರಿಕೋದ್ಯಮವನ್ನು ಕತ್ತು ಹಿಸುಕಲಾಗುತ್ತಿದೆ. ತಮಾಷೆ ಮಾಡುವವರಷ್ಟೇ ರಕ್ಷಿಸಲ್ಪಡುತ್ತಾರೆ'' ಎಂದು ಆರೋಪಿಸಿದ್ದಾರೆ.