ನವದೆಹಲಿ, ನ.13 (DaijiworldNews/PY): "ಭಾರತ-ಚೀನಾ ನಡುವೆ ಮಾತುಕತೆ ಮುಂದುವರೆದಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
"ಲಡಾಕ್ ಸಂಘರ್ಷದ ವಿಚಾರವಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳಬೇಕು ಎಂದಲ್ಲಿ ನಾವು ತಿಳಿಸುತ್ತೇವೆ. ಉಭಯ ದೇಶಗಳ ನಡುವೆ ಚರ್ಚೆ ಮುಂದುವರೆದಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಬುಧವಾರ ಸರ್ಕಾರಗಳಿಂದ ಬಂದ ಮಾಹಿತಿಯ ಪ್ರಕಾರ, ಭಾರತ ಹಾಗೂ ಚೀನಾ ಸೇನಾಪಡೆಗಳನ್ನು ಹಿಂದಕ್ಕೆ ಪಡೆಯಲು ಮೂರು ಹಂತಗಳ ಪ್ರಕ್ರಿಯೆಗೆ ಒಪ್ಪಿಕೊಂಡಿತ್ತು. ಗಲಭೆಯ ಪ್ರದೇಶದಿಂದ ಸೇನೆಯನ್ನು ಕಾಲಾನುಕ್ರಮವಾಗಿ ಹಿಂದಕ್ಕೆ ಪಡೆಯಲು ಮುಂದಾಗಿವೆ.
"ಭಾರತ-ಚೀನಾ ನಡುವೆ ನ.6ರಂದು ನಡೆದ ಎಂಟನೇ ಸುತ್ತಿನ ಉನ್ನತ ಮಟ್ಟದ ಕಮಾಂಡರ್ ಮಾತುಕತೆಯ ಸಂದರ್ಭ ಈ ವಿಚಾರವಾಗಿ ತೀವ್ರವಾದ ಚರ್ಚೆ ನಡೆಸಲಾಗಿತ್ತು. ಘರ್ಷಣೆ ಪೀಡಿತ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯುವ ವಿಚಾರದ ಬಗೆಗಿನ ಅಭಿಪ್ರಾಯವನ್ನು ಆಳವಾಗಿ ಹಾಗೂ ರಚನಾತ್ಮಕವಾಗಿ ಚರ್ಚಿಸಲಾಗಿತ್ತು" ಎಂದು ತಿಳಿಸಿದ್ದಾರೆ.
"ಪೂರ್ವ ಲಡಾಖ್ನ ವಿವಿಧ ಪರ್ವತ ಪ್ರದೇಶಗಳಲ್ಲಿ ಸುಮಾರು 50,000 ಭಾರತೀಯ ಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದ್ದು, ಚೀನಾ ಸೈನ್ಯವೂ ಕೂಡಾ ಸಮನಾದ ಸಂಖ್ಯೆಯ ಯೋಧರನ್ನು ಆ ಪ್ರದೇಶದಲ್ಲಿ ನಿಯೋಜನೆ ಮಾಡಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.