ಕೊಲ್ಕತ್ತಾ, ನ.13 (DaijiworldNews/HR): ಪಕ್ಷದ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ಹೊಡೆದು, ಕಪ್ಪು ಬಾವುಟ ತೋರಿಸಿದ ಘಟನೆ ನಡೆದಿದೆ.
ಇನ್ನು ಈ ದಾಳಿಯಲ್ಲಿ ಬೆಂಗಾವಲು ವಾಹನಗಳ ಜೊತೆಗೆ ದಿಲೀಪ್ ಘೋಷ್ ಅವರ ವಾಹನಕ್ಕೆ ಕೂಡ ಹಾನಿಯಾಗಿದೆ ಎಂದು ವರದಿಯಾಗಿದೆ.
ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್, ''ಈ ರೀತಿಯಾಗಿ ನನ್ನ ಮೇಲೆ ಹಲ್ಲೆ ನಡೆಸುವುದು ಇದು ಮೊದಲೇನಲ್ಲ, ಈ ಹಿಂದೆಯೂ ಅನೇಕ ಬಾರಿ ನನ್ನ ಮೇಲೆ ದಾಳಿ ನಡೆದಿದೆ. ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸುತ್ತೇವೆ ಎಂಬ ಆತಂಕದಿಂದ ಟಿಎಂಸಿ ಮತ್ತು ಅವರ ಸ್ನೇಹಿತರು ನಿರಾಶೆಗೊಂಡು ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ಆದರೆ ನಮ್ಮೊಂದಿಗೆ ಜನರಿದ್ದಾರೆ. ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತಡೆಗಟ್ಟಲು ಬದಲಾವಣೆಯ ಅಗತ್ಯವಿದೆ'' ಎಂದು ಹೇಳಿದ್ದಾರೆ.