ಬೆಂಗಳೂರು, ನ. 13 (DaijiworldNews/MB) : ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್ನ ಸ್ಥಾಪಕ ರವಿ ಬೆಳೆಗೆರೆ ನ.12 ರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾದರು.
62 ವರ್ಷ ಪ್ರಾಯದ ಅವರು, 1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದಾರೆ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ರವಿ ಬೆಳಗೆರೆಯವರು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು.
ಆ ಬಳಿಕ ಪತ್ರಿಕೋದ್ಯಮದಲ್ಲಿ ತನ್ನ ವೃತ್ತಿ ಜೀನವ ಆರಂಭಿಸಿದ ಅವರು, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ 1995 ರಲ್ಲಿ ಹಾಯ್ ಬೆಂಗಳೂರು ಟಾಬ್ಲಾಯ್ಡ್ ಪತ್ರಿಕೆಯನ್ನು ಪ್ರಾರಂಭಿಸಿದ್ದರು.
ಓ ಮನಸೇ ಮೂಲಕ ಖ್ಯಾತಿ ಪಡೆದ ಅವರ ಬಾಟಮ್ ಐಟಮ್, ಖಾಸ್ ಬಾತ್ ಅಂಕಗಳು ಇಂದಿಗೂ ಜನಪ್ರಿಯ. ಹಿಮಾಗ್ನಿ, ನೀನಾ ಪಾಕಿಸ್ತಾನ? ಡಿ ಕಂಪನಿ, ದಂಗೆಯ ದಿನಗಳು, ಹೇಳಿ ಹೋಗು ಕಾರಣ ಅನೇಕ ಜನಪ್ರಿಯ ಕೃತಿಗಳನ್ನು ಅವರು ರಚಿಸಿದ್ದಾರೆ.
ಇನ್ನು ಅವರು ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದೆ.
ನಗರದ ಕರಿಷ್ಮಾ ಹಿಲ್ನಲ್ಲಿರುವ ಬೆಳಗೆರೆ ನಿವಾಸಕ್ಕೆ ಪಾರ್ಥೀವ ಶರೀರವನ್ನು ರವಾನೆ ಮಾಡಲಾಗಿದ್ದು, ರವಿ ಬೆಳಗೆರೆಯವರು ಸ್ಥಾಪಿಸಿರುವ ಪ್ರಾರ್ಥನಾ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿದುಬಂದಿದೆ.