ಪಾಟ್ನಾ, ನ. 12 (DaijiworldNews/MB) : ''ವಂಚನೆ, ಹಣ, ತೋಳ್ಬಲದಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಗೆ ಜಯಗಳಿಸಿದೆ. ಆದರೆ ನಿಜವಾಗಿ ಆರ್ಜೆಡಿ ರಾಜ್ಯದ ಜನರ ಬೆಂಬಲ ಗಳಿಸಿದೆ'' ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ಹೇಳಿದರು.
ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ''ಮಹಾಘಟ ಬಂಧನ್ಕ್ಕಿಂತ ಕೇವಲ 12, 270 ಅಧಿಕ ಮತ ಹಾಗೂ 15 ಕ್ಕಿಂತ ಅಧಿಕ ಸ್ಥಾನವನ್ನು ಎನ್ಡಿಎ ಕೂಟ ಪಡೆದಿರುವುದು ಆಶ್ಚರ್ಯದಾಯಕ. ನಾವು ಕಡಿಮೆ ಅಂತರದಲ್ಲಿ ಸೋಲನುಭಿಸಿದ್ದೇವೆ. ಹಲವು ಕ್ಷೇತ್ರಗಳಲ್ಲಿ 900ಕ್ಕೂ ಹೆಚ್ಚು ಅಧಿಕ ಅಂಚೆ ಮತಗಳನ್ನು ಅಮಾನ್ಯ ಮಾಡಲಾಗಿದೆ'' ಎಂದು ಮತ ಎಣಿಕೆ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹಾಗೆಯೇ ಆರಂಭದಲ್ಲಿ ಎಣಿಕೆ ಕಾರ್ಯ ನಡೆಸದೆ ಕೊನೆಯಲ್ಲಿ ಮಾಡಲಾದ ಎಲ್ಲಾ ಕ್ಷೇತ್ರಗಳ ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲೇ ನಿತೀಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿ ಅವರು, ''ಜೆಡಿಯು ಮೂರನೇ ಸ್ಥಾನಕ್ಕೆ ಕುಸಿದಿದೆ. ನಿಜವಾಗಿಯೂ ನಿತೀಶ್ ಕುಮಾರ್ ಅವರಿಗೆ ಆತ್ಮಸಾಕ್ಷಿಯಿದ್ದರೆ, ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕು'' ಎಂದು ಹೇಳಿದರು.
''ಜನಾದೇಶ ನಮ್ಮ ಪರವಾಗಿತ್ತು. ಮುಖ್ಯಮಂತ್ರಿ ಕುರ್ಚಿಯಲ್ಲಿ ಬೇರೆ ಯಾರೋ ಇದ್ದರೂ ನಾನೇ ನಿಜವಾದ ವಿನ್ನರ್'' ಎಂದು ಕೂಡಾ ಹೇಳಿದರು.