ಚೆನ್ನೈ, ನ.12 (DaijiworldNews/HR): ತಮಿಳುನಾಡು ಸರ್ಕಾರ ನವೆಂಬರ್ 16ರಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದ್ದು, ಇದೀಗ ಪೋಷಕರ ವಿರೋಧದ ಬಳಿಕ ತನ್ನ ನಿರ್ಧಾರವನ್ನು ಕೈಬಿಟ್ಟಿದ್ದು, ಕೊರೊನಾ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡ ಬಳಿಕ ಮತ್ತೆ ಶಾಲೆ ಆರಂಭಿಸುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಸಾಂಧರ್ಭಿಕ ಚಿತ್ರ
ನವೆಂಬರ್ 16ರಿಂದ 9ನೇ ತರಗತಿಯಿಂದ12ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್ಗಳನ್ನು ತೆರೆಯಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಶಾಲೆಗಳನ್ನು ಆರಂಭಿಸುವ ಕುರಿತು ಸರ್ಕಾರ ಹಿಂದೆ ಸರಿದಿದ್ದು, ಪೋಷಕರು ಹಾಗೂ ಶಿಕ್ಷಕರು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಎಲ್ಲಾ ಶಾಲೆಗಳಿಗೆ ನಿರ್ದೇಶಿಸಲಾಗಿತ್ತು. ಕೆಲವು ಕಡೆ ಪೋಷಕರು ಶಾಲೆಗಳನ್ನು ಆರಂಭಿಸಬೇಕು ಎಂದಿದ್ದಾರೆ. ಆದರೆ, ಇನ್ನೂ ಕೆಲವು ಕಡೆಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸದ್ಯದ ಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ಮಾರ್ಗಸೂಚಿಗಳನ್ನು ಪರಿಗಣಿಸಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ವಿಜ್ಞಾನ, ತಾಂತ್ರಿಕ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಪಿಎಚ್ಡಿ ವಿದ್ಯಾರ್ಥಿಗಳಿಗೆ ಡಿಸೆಂಬರ್ 2 ರಿಂದ ಕಾಲೇಜುಗಳನ್ನು ಆರಂಭಿಸಿ, ಈ ವಿದ್ಯಾರ್ಥಿಗಳಿಗೆ ಮಾತ್ರವೇ ಹಾಸ್ಟೆಲ್ಗಳನ್ನು ತೆರೆದು ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದೂ ಹೇಳಿದೆ.
ಉಳಿದಂತೆ ವಿದ್ಯಾರ್ಥಿಗಳಿಗೆ ಕಾಲೇಜು ಪುನರಾರಂಭದ ದಿನಾಂಕವನ್ನು ಬಳಿಕ ಪ್ರಕಟಿಸಲಾವುದು. ಅಲ್ಲಿಯವರೆಗೆ ಆನ್ಲೈನ್ ತರಗತಿಗಳು ಮುಂದುವರಿಯಲಿವೆ ಎಂದು ಮಾಹಿತಿ ನೀಡಿದೆ.