ಪಾಟ್ನಾ, ನ. 12 (DaijiworldNews/MB) : ''ಅವನು ಒಳ್ಳೆಯ ಹುಡುಗ, ಆಡಳಿತದ ಅನುಭವವಿಲ್ಲವಷ್ಟೇ'' ಎಂದು ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ತೇಜಸ್ವಿ ಯಾದವ್ರನ್ನು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹಾಡಿ ಹೊಗಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಜೊತೆ ಮಾತನಾಡಿದ ಅವರು, ''ತೇಜಸ್ವಿ ಯಾದವ್ ಬಹಳ ಒಳ್ಳೆಯ ಹುಡುಗ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಆತನಿಗೆ ಇರುವ ಆಡಳಿತದ ಅನುಭವ ಸಾಲುವುದಿಲ್ಲ'' ಎಂದು ಹೇಳಿದ್ದಾರೆ.
''ಪ್ರಸ್ತುತ ಸ್ಥಿತಿಗತಿ ನೋಡಿದರೆ ತೇಜಸ್ವಿ ಯಾದವ್ಗೆ ಬಿಹಾರದಲ್ಲಿ ಆಡಳಿತ ನಡೆಸಲು ಸಾಧ್ಯವಾಗದು. ಒಂದು ವೇಳೆ ತೇಜಸ್ವಿ ಮುಖ್ಯಮಂತ್ರಿಯಾಗಿದ್ದರೆ, ಅವರ ತಂದೆ ಲಾಲು ಪ್ರಸಾದ್ ಯಾದವ್ ಕೈಯಲ್ಲಿ ಅಧಿಕಾರವಿರುತ್ತಿತ್ತು. ಆಗ ಬಿಹಾರ ಮತ್ತೆ ಜಂಗಲ್ ರಾಜ್ ಆಗುತ್ತಿತ್ತು'' ಎಂದು ಹೇಳಿದರು.
''ರಾಜ್ಯದಲ್ಲಿ ಅಧಿಕಾರ ವಹಿಸಿಕೊಳ್ಳಲು ತೇಜಸ್ವಿಗೆ ಇರುವ ಅನುಭವ ಸಾಲದು, ರಾಜ್ಯವನ್ನು ನಿಭಾಯಿಸುವ ಸಾಮರ್ಥ್ಯವನ್ನು ಆತ ಸಂಪಾದಿಸಿಕೊಳ್ಳಬೇಕಿದೆ'' ಎಂದು ತಿಳಿಸಿದ್ದಾರೆ.