ನವದೆಹಲಿ, ನ. 12 (DaijiworldNews/MB) : ಕೊರೊನಾ ಲಸಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬದ್ದತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರೆಯೆಸಸ್ ಅವರೊಂದಿಗೆ ಪ್ರಧಾನಿ ಮೋದಿಯವರು ಕೊರೊನಾ ಸೋಂಕು ಹಾಗೂ ಲಸಿಕೆಯ ವಿಚಾರವಾಗಿ ಚರ್ಚೆ ನಡೆಸಿದ್ದು ''ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಸಮುದಾಯಕ್ಕೆ ಭಾರತದ ಬೆಂಬಲ ನೀಡುತ್ತದೆ'' ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರೆಯೆಸಸ್ ಅವರು, ''ಕೋವಾಕ್ಸ್ ಬಗ್ಗೆ ನಿಮಗೆ ಇರುವ ಬದ್ದತೆ ಹಾಗೂ ಕೊರೊನಾ ಸಿಕೆಯನ್ನು ಜಾಗತಿಕವಾಗಿ ಲಭ್ಯವಾಗುವಂತೆ ಮಾಡಲು ನೀವು ಒತ್ತು ನೀಡುತ್ತಿರುವುದಕ್ಕೆ ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿಯವರೇ. ಈ ಸಾಂಕ್ರಾಮಿಕ ರೋಗವು ಜಗತ್ತಿಗೆ ದೊಡ್ಡ ಸವಾಲಾಗಿದೆ. ಈ ಕೊರೊನಾ ಸೋಂಕಿನ ಅಂತ್ಯಗೊಳಿಸಲು ನಾವು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ'' ಎಂದು ಹೇಳಿದ್ದಾರೆ.
ಹಾಗೆಯೇ ಇನ್ನೊಂದು ಟ್ವೀಟ್ನಲ್ಲಿ, ''ನಮಸ್ತೆ ಪ್ರಧಾನಿ ನರೇಂದ್ರ ಮೋದಿ, ಸಾಂಪ್ರದಾಯಿಕ ಔಷಧದ ಸಂದರ್ಭದಲ್ಲಿ ಜ್ಞಾನ, ಸಂಶೋಧನೆ ಮತ್ತು ತರಬೇತಿಯ ಸಹಕಾರವನ್ನು ಬಲಪಡಿಸುವ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕವಾಗಿ ಮತ್ತು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯಲ್ಲಿ ಭಾರತದ ನಾಯಕತ್ವವನ್ನು ಸ್ವಾಗತಿಸುತ್ತದೆ'' ಎಂದಿದ್ದಾರೆ.