ಬೆಂಗಳೂರು, ನ. 12 (DaijiworldNews/MB) : ಸುಮಾರು 3 ಕೋಟಿ ರೂ.ಗಿಂತ ಅಧಿಕ ಹಾನಿಗೆ ಕಾರಣವಾದ ಬೆಂಗಳೂರಿನ ಕೆಮಿಕಲ್ ಫಾಕ್ಟರಿ ಅಗ್ನಿ ದುರಂತಕ್ಕೆ ಸಂಬಂಧಿಸಿ ರೇಖಾ ಕೆಮಿಕಲ್ಸ್ ಮತ್ತು ರೇಖಾ ಕೆಮಿಕಲ್ ಕಾರ್ಪೊರೇಶನ್ನ ರಾಸಾಯನಿಕ ಘಟಕಗಳ ಮೂವರು ಮಾಲೀಕರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ನಗರದ ಹೊಸ ಗುಡ್ಡದಹಳ್ಳಿಯಲ್ಲಿನ ಬಾಪುಜಿನಗರದಲ್ಲಿರುವ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ.
ನವೆಂಬರ್ 10 ರಂದು ಈ ಅಗ್ನಿ ಅವಘಡ ಸಂಭವಿಸಿದ್ದು ಅಗ್ನಿಶಾಮಕ ಇಲಾಖೆಯು ಸತತ ಆರು ಗಂಟೆಗಳ ಕಾರ್ಯಚರಣೆಯ ಬಳಿಕ ಬೆಂಕಿಯನ್ನು ನಂದಿಸಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗಳಿಂದ ಯಾವುದೇ ಅಗತ್ಯ ಅನುಮತಿಗಳನ್ನು ಪಡೆಯದೆ ಅಧಿಕ ಜನರು ವಾಸವಿರುವ ಪ್ರದೇಶದಲ್ಲಿ ಫ್ಯಾಕ್ಟರಿ ನಡೆಸಿದ್ದಕ್ಕಾಗಿ ಪೊಲೀಸರು ಮಾಲೀಕರನ್ನು ಬಂಧಿಸಿದ್ದಾರೆ.
ಬಂಧಿತ ಮಾಲೀಕರು ಸಜ್ಜನ್ ರಾಜ್ (66), ಕಮಲಾ (60) ಮತ್ತು ಅನಿಲ್ ಕುಮಾರ್ (30) ಎಂದು ಪೊಲೀಸರು ತಿಳಿಸಿದ್ದಾರೆ.
"ಸಜ್ಜನ್ ರಾಜ್ ಸುಮಾರು ಮೂರು ದಶಕಗಳಿಂದ ರೇಖಾ ಕೆಮಿಕಲ್ಸ್ ಹೆಸರಿನಲ್ಲಿ ರಾಸಾಯನಿಕ ಸರಬರಾಜು ವ್ಯವಹಾರ ನಡೆಸುತ್ತಿದ್ದು ಮತ್ತು ಅವರ ಪತ್ನಿ ಕಮಲಾ ಅವರು ರೇಖಾ ಕೆಮಿಕಲ್ಸ್ ಕಾರ್ಪೊರೇಶನ್ಗಳ ಮಾಲೀಕರಾಗಿದ್ದಾರೆ" ಎಂದು ಪೊಲೀಸ್ ಪಶ್ಚಿಮ ವಿಭಾಗದ ಉಪ ಆಯುಕ್ತ ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ. ಹಾಗೆಯೇ ಅವರ ಪುತ್ರ, ಕುಮಾರ್ ಸ್ಪಲ್ಪ ಸಮಯದಿಂದ ಈ ವ್ಯವಹಾರವನ್ನು ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
''ಸುಮಾರು 64,000 ಲೀಟರ್ಗಳಷ್ಟು 16 ಬಗೆಯ ರಾಸಾಯನಿಕಗಳನ್ನು, 320 ಕ್ಕೂ ಹೆಚ್ಚು ಬ್ಯಾರೆಲ್ಗಳಲ್ಲಿ ಸಂಗ್ರಹಿಸಲಾಗಿದೆ'' ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
''ಅವರ ನೌಕರರೊಬ್ಬರು ರಾಸಾಯನಿಕಗಳನ್ನು ಒಂದು ಬ್ಯಾರೆಲ್ನಿಂದ ಇನ್ನೊಂದಕ್ಕೆ ವರ್ಗಾಯಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
"ರಾಸಾಯನಿಕವನ್ನು ವರ್ಗಾಯಿಸುವ ವೇಳೆ ಬಿಸಿಲಿನ ಕಾರಣದಿಂದಾಗಿ ಈ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ" ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಪಕ್ಕದ ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿದ್ದರಿಂದ ಬೆಂಕಿ ನಂದಿಸಲು ಕಷ್ಟವಾಯಿತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.