ಮೈಸೂರು, ನ. 12 (DaijiworldNews/MB) : ಎರಡು ದಿನಗಳ ಹಿಂದೆ ಫೋಟೋ ಶೂಟ್ ಮಾಡಿಸುತ್ತಿದ್ದ ಜೋಡಿಯು ತಲಕಾಡು ಕಾವೇರಿ ನದಿಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆಯಲ್ಲಿ ಈ ಜೋಡಿಯ ಪ್ರಾಣಕ್ಕೆ ಹೈ ಹೀಲ್ಸ್ ಚಪ್ಪಲಿಯೇ ಕುತ್ತಾಗಿ ಪರಿಣಮಿಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪೊಲೀಸರು, ಈ ಜೋಡಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಲು ಯುವತಿ ಧರಿಸಿದ್ದ ಹೈ ಹೀಲ್ಸ್ ಚಪ್ಪಲಿ ಕಾರಣ ಎಂದು ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಶ್ಯಂತ್, "ಪ್ರವಾಸಿಗರು ತೆಪ್ಪದಲ್ಲಿ ತೆರಳುವ ಸಂದರ್ಭದಲ್ಲಿ "ಲೈಫ್ ಜಾಕೆಟ್ ಧರಿಸುವುದು" ಎಲ್ಲಾ ಪ್ರವಾಸಿ ತಾಣಗಳಲ್ಲಿ ಕಡ್ಡಾಯವಾಗುವಂತೆ ನೀರಾವರಿ ಇಲಾಖೆಗೆ ಪತ್ರ ಬರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.
"ಈ ತೆಪ್ಪಗಳು ಇತಿಹಾಸಪೂರ್ವ ಕಾಲದಿಂದಲೂ ಲಭ್ಯವಿರುವ ಮತ್ತು ಇಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಜಲ ಸಾರಿಗೆ ವ್ಯವಸ್ಥೆಯಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಹೀಗೆ ತೆಪ್ಪದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡುವ ಸಂದರ್ಭದಲ್ಲಿ ನಾವು ಗಮನಹರಿಸಬೇಕಾಗಿದೆ. ತೆಪ್ಪದಲ್ಲಿ ಕೊಂಚ ಆಯತಪ್ಪಿದರೂ ಕೂಡಾ ಮುಳುಗುವ ಸಾಧ್ಯತೆಯಿದೆ. ನಾವು ಈ ತೆಪ್ಪಗಳಲ್ಲಿ ಜೀವರಕ್ಷಕ ಜಾಕೆಟ್ಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಬೇಕಾಗಿದೆ. ಈ ಬಗ್ಗೆ ನೀರಾವರಿ ಇಲಾಖೆಗೆ ನಾನು ಪತ್ರ ಬರೆಯುತ್ತೇನೆ" ಎಂದು ಹೇಳಿದರು.
ಪೊಲೀಸರ ಪ್ರಕಾರ, ಮೈಸೂರು ಮತ್ತು ಸುತ್ತಮುತ್ತಲಿನ ಸ್ಥಳಗಳಾದ ಕೆ.ಆರ್. ಎಸ್. ನಗರ, ತಿರುಮಕೂಡಲು ನರಸೀಪುರ ಮೊದಲಾದೆಡೆ ತೆಪ್ಪಗಳನ್ನು ಕಾನೂನುಬಾಹಿರವಾಗಿ ಬಳಸಲಾಗುತ್ತಿದೆ.
ಎರಡು ದಿನಗಳ ಹಿಂದೆ ಮೈಸೂರಿನ ಹೊರವಲಯದಲ್ಲಿರುವ ತಿರುಮಕೂಡಲು ನರಸೀಪುರದ ಕ್ಯಾತಮಾರನಹಳ್ಳಿಯವರಾದ ಚಂದ್ರು (28) ಮತ್ತು ಶಶಿಕಲಾ (20) ಜೋಡಿಯು ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗಾಗಿ ಕಾವೇರಿ ನದಿಯ ಮೂಲವಾದ ತಲಕಾಡಿ ಕುಟುಂಬ ಸದಸ್ಯರು ಹಾಗೂ ಪೋಟೋಗ್ರಾಫರ್ ಜೊತೆ ಬಂದಿದ್ದರು.
ಈ ಜೋಡಿಯು ಪ್ರಸಿದ್ದ 'ಟೈಟಾನಿಕ್' ಭಂಗಿಯಲ್ಲಿ ಫೋಟೋ ತೆಗೆಯಲೆಂದು ಕುಳಿತಿದ್ದು ಈ ವೇಳೆ ತೆಪ್ಪದ ನಿಯಂತ್ರಣ ತಪ್ಪಿ ಈ ಜೋಡಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಜೋಡಿಯ ವಿವಾಹವನ್ನು ನವೆಂಬರ್ 22 ರಂದು ನಡೆಸಲು ತೀರ್ಮಾನಿಸಲಾಗಿತ್ತು.