ನವದೆಹಲಿ, ನ. 12 (DaijiworldNews/MB) : ''ಒಂದು ಕುಟುಂಬ ನಡೆಸುವ ಪಕ್ಷಗಳಿಂದ ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ ಉಂಟಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಬಿಹಾರ ಚುನಾವಣೆ ಹಾಗೂ ವಿವಿದೆಡೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
''ಬಿಹಾರ ಚುನಾವಣೆ ಹಾಗೂ ಇತರೆಡೆ ನಡೆದ ಉಪಚುನಾವಣೆಯಲ್ಲಿ ಜನರು ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಮತದಾನ ಮಾಡಿದ್ದಾರೆ. 21ನೇ ಶತಮಾನದಲ್ಲಿ ಅಭಿವೃದ್ಧಿ ಮಾತ್ರ ರಾಷ್ಟ್ರೀಯ ರಾಜಕಾರಣದ ಆಧಾರವಾಗಲಿದೆ ಎಂದು ಜನರು ತೀರ್ಮಾನಿಸಿದ್ದಾರೆ'' ಎಂದ ಅವರು ''ನಮ್ಮ ಪಕ್ಷದ ಗೆಲುವಿನ ಏಕೈಕ ಮಂತ್ರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್'' ಎಂದು ಹೇಳಿದರು.
ಹಾಗೆಯೇ ಈ ವೇಳೆ, ''ಬಿಜೆಪಿ ವಿರುದ್ದ ಪ್ರಜಾಸತ್ತಾತ್ಮಕವಾಗಿ ಹೋರಾಡಲು ಸಾಧ್ಯವಾಗದವರು ಪಕ್ಷದ ಕಾರ್ಯಕರ್ತರನ್ನು ಹತ್ಯೆಗೈಯಲು ಮುಂದಾಗಿದ್ದಾರೆ'' ಎಂದು ಆರೋಪಿಸಿದರು.
''ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸುವ ಸೈಲೆಂಟ್ ಮತದಾರರು'' ಎಂದು ಹೇಳಿದ ಪ್ರಧಾನಿಯವರು, ಇದೇ ವೇಳೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವಲ್ಲಿ ಕಾರ್ಯನಿರ್ವಹಿಸಿದ ಚುನಾವಣಾ ಆಯೋಗ, ಭದ್ರತಾ ಪಡೆ ಮತ್ತು ಆಡಳಿತವನ್ನು ಶ್ಲಾಘಿಸಿದರು.