ನವದೆಹಲಿ, ನ. 11 (DaijiworldNews/MB) : 2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಜೈಲು ಸೇರಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಇನ್ನಿಬ್ಬರಿಗೆ 50000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ದ್ವಿ ಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿದ್ದು ನಾವು ಅವರ ಚಾನೆಲ್ ನೋಡಲ್ಲ, ಆದರೆ ಅರ್ನಬ್ ಮೇಲೆ ಸರ್ಕಾರ ಗುರಿ ಮಾಡುವುದು ತಪ್ಪು ಎಂದು ಹೇಳಿತ್ತು. ಹಾಗೆಯೇ ಜಾಮೀನು ಮಂಜೂರು ಮಾಡಿದೆ.
2018ರಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಮುಂಬೈ ಪೊಲೀಸರು ಹಠಾತ್ತನೇ ದಾಳಿ ನಡೆಸಿ ಅರ್ನಬ್ನ್ನು ಬಂಧಿಸಿದ್ದರು. ಹಾಗೆಯೇ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಜಾಮೀನು ಅರ್ಜಿ ಕೋರಿ ಅರ್ನಬ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ವಿಚಾರಣೆ ಮುಂದೂಡಿದ ಬಳಿಕ ಸರ್ಕಾರವು ಬಾಂಬೆ ಹೈಕೋರ್ಟ್ನಲ್ಲಿ ದೀಪಾವಳಿ ರಜೆ ನೀಡಿತ್ತು. ಬಳಿಕ ಮಧ್ಯಂತರ ಜಾಮೀನು ಕೋರಿ ಅರ್ನಬ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಬುಧವಾರ ಜಾಮೀನು ದೊರೆತಿದೆ.