ಬೆಂಗಳೂರು, ನ.11 (DaijiworldNews/PY): "ಮಹಿಳೆಯನ್ನು ಎಳೆದಾಡಿ, ತೀರಾ ಅನುಚಿತವಾಗಿ ವರ್ತಿಸಿದ ಸಿದ್ದು ಸವದಿ ಮತ್ತು ಅವರ ಅನುಚರರ ಕೃತ್ಯ ಖಂಡನೀಯ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮಹಿಳೆಯನ್ನು ಎಳೆದಾಡಿ, ತೀರಾ ಅನುಚಿತವಾಗಿ ವರ್ತಿಸಿದ ಸಿದ್ದು ಸವದಿ ಮತ್ತು ಅವರ ಅನುಚರರ ಕೃತ್ಯ ಖಂಡನೀಯ. ಶಾಸಕರಾಗಿ ಹೆಣ್ಣಿನ ಬಗ್ಗೆ ಎಷ್ಟು ಗೌರವದಿಂದ ನಡೆದುಕೊಳ್ಳಬೇಕು ಅನ್ನೋ ಕನಿಷ್ಟ ಪ್ರಜ್ಞೆಯೆ ಇರದಿದ್ದರೆ ಹೇಗೆ?. ಬಿಜೆಪಿ ತಮ್ಮ ಶಾಸಕರಿಗೆ ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಬುದ್ಧಿ ಹೇಳಲಿ" ಎಂದಿದ್ದಾರೆ.
23 ಸದಸ್ಯರಿರುವ ಮಹಾಲಿಂಗಪುರ ಪುರಸಭೆಯಲ್ಲಿ ಕಾಂಗ್ರೆಸ್ 10 ಸ್ಥಾನ ಹಾಗೂ ಬಿಜೆಪಿ 13 ಸ್ಥಾನವನ್ನು ಹೊಂದಿದ್ದು, ಈ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನವೆಂಬರ್ 9 ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಈ ವೇಳೆ ಮೂವರು ಬಿಜೆಪಿ ಸದಸ್ಯರಾದ ಗೋದಾವರಿ ಭಟ್, ಚಾಂದಿನಿ ನಾಯಕ್ ಹಾಗೂ ಸವಿತಾ ಹುರಕಡ್ಳಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು ಅವರು ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿ ಸವಿತಾ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಗೋದಾವರಿಯವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು.
ಈ ಎಲ್ಲಾ ಬೆಳವಣಿಗೆಯ ಬಗ್ಗೆ ತೀವ್ರ ಆಕ್ರೋಶಕ್ಕೆ ಒಳಗಾದ ಶಾಸಕ ಸವದಿ ಈ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸಿದ್ದಂತೆ ತಡೆದು ಪೊಲೀಸರ ಎದುರೇ ಸವಿತಾ ಹುರಕಡ್ಳಿಯವರನ್ನು ಎಳೆದಾಡಿ ಅವಮಾನಿಸಿದ್ದಾರೆ ಎನ್ನಲಾಗಿದೆ.