ಮುಂಬೈ, ನ. 11 (DaijiworldNews/MB) : ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಸ್ನೇಹಿತೆ ಗ್ಯಾಬ್ರಿಯೆಲಾ ಡಿಮೆಟ್ರಿಯೇಡ್ಸ್ ಅವರು ಡ್ರಗ್ ಜಾಲಕ್ಕೆ ಸಂಬಂಧಿಸಿ ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಬಾಲಿವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಸೋವಾರ ನಟ ಅರ್ಜುನ್ ರಾಮ್ಪಾಲ್ ಮುಂಬೈ ನಿವಾಸದ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ರಾಮ್ಪಾಲ್ ಮತ್ತು ಗ್ಯಾಬ್ರಿಯೆಲಾ ಅವರಿಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಗ್ಯಾಬ್ರಿಯೆಲಾ ಡಿಮೆಟ್ರಿಯೇಡ್ಸ್ ಬುಧವಾರ ವಿಚಾರಣೆಗೆ ಹಾಜರಾಗಿದ್ದು ಗುರುವಾರ ಅರ್ಜುನ್ ರಾಮ್ಪಾಲ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಕಳೆದ ತಿಂಗಳು ಗ್ಯಾಬ್ರಿಯೆಲಾ ಸಹೋದರ ಅಗಿಸಿಲಾಸ್ ಡಿಮೆಟ್ರಿಯೇಡ್ಸ್ನನ್ನು ಎನ್ಸಿಬಿ ಪೊಲೀಸರು ಬಂಧಿಸಿದ್ದರು.
ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಅವರ ನಿವಾಸದ ಮೇಲೆ ಇತ್ತೀಚೆಗೆ ಎನ್ಸಿಬಿ ದಾಳಿ ನಡೆಸಿದ್ದು ನಿವಾಸದಲ್ಲಿ ಗಾಂಜಾ ಪತ್ತೆಯಾಗಿತ್ತು. ಈ ಹಿನ್ನೆಲೆ ಫಿರೋಜ್ ಪತ್ನಿ ಶಭಾನಾ ಸಯೀದ್ ಅವರನ್ನು ಬಂಧಿಸಲಾಗಿತ್ತು. ಬಳಿಕ ರಾಮ್ಪಾಲ್ ಅವರ ನಿವಾಸದ ಮೇಲೆ ಎನ್ಸಿಬಿ ದಾಳಿ ನಡೆಸಿದೆ.