ನವದೆಹಲಿ, ನ. 11 (DaijiworldNews/MB) : 2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಜೈಲು ಸೇರಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಕೈಗೆತ್ತಿಕೊಂಡಿದ್ದು ವಿಚಾರಣೆಯ ವೇಳೆ, ''ನಾವು ಅವರ ಚಾನೆಲ್ ನೋಡಲ್ಲ, ಆದರೆ ಅರ್ನಬ್ ಮೇಲೆ ಸರ್ಕಾರ ಗುರಿ ಮಾಡುವುದು ತಪ್ಪು'' ಎಂದು ಹೇಳಿದೆ.
ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ದ್ವಿ ಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿದ್ದು, ''ಈ ದೇಶದ ಸಾಂವಿಧಾನಿಕ ಕೋರ್ಟ್ ಕಾನೂನು ಜಾರಿಗೆ ತರುವ ಮೂಲಕ ಜನರ ವೈಯಕ್ತಿಕ ಸ್ವಾತಂತ್ಯ್ರವನ್ನು ಕಾಪಾಡದಿದ್ದಲ್ಲಿ ಬೇರೆ ಯಾರು ಕಾಪಾಡುತ್ತಾರೆ. ಒಂದು ರಾಜ್ಯವು ವ್ಯಕ್ತಿಯೋರ್ವನನ್ನು ಗುರಿಯಾಗಿಸಿಕೊಳ್ಳುವುದು ಸರಿಯಲ್ಲ'' ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ.
''ನಾವು ನೋಡಿದ ಹಲವು ಪ್ರಕರಣದಲ್ಲಿ ಹೈಕೋರ್ಟ್ಗಳು ಆರೋಪಿಗಳಿಗೆ ಜಾಮೀನು ನೀಡಲು ವಿಫಲವಾಗುತ್ತಿದೆ. ಹಾಗೆಯೇ ಜನರ ವೈಯಕ್ತಿಕ ಸ್ವಾತಂತ್ಯ್ರವನ್ನು ಕಾಪಾಡುವಲ್ಲಿಯೂ ವಿಫಲವಾಗುತ್ತಿದೆ. ತಮ್ಮ ಅಭಿಪ್ರಾಯ, ರಾಜಕೀಯ ಸಿದ್ದಾಂತಗಳ ವಿಚಾರವಾಗಿ ರಾಜ್ಯ ಸರ್ಕಾರವೊಂದು ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸುವುದು ಆತಂಕಕಾರಿ ಸಂಗತಿ. ರಾಜ್ಯ ಸರ್ಕಾರವು ಜನರ ವ್ಯಕ್ತಿಗತ ಸ್ವಾತಂತ್ಯ್ರದ ಹರಣಕ್ಕೆ ಮುಂದಾದರೆ ಜನರ ಸ್ವಾತಂತ್ಯ್ರ ರಕ್ಷಣೆಗೆ ಸುಪ್ರೀಂ ಕೋರ್ಟ್ಯಿದೆ'' ಎಂದು ಹೇಳಿದೆ.
ಈ ಸಂದರ್ಭದಲ್ಲಿ ಅರ್ನಬ್ ಗೋಸ್ವಾಮಿಯವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದರು.