ಬೆಂಗಳೂರು, ನ.11 (DaijiworldNews/PY): "ಬಿಜೆಪಿ ನಾಯಕರಿಗೆ ಏನು ಬೇಕಾದರೂ ಮಾಡಬಹುದು ಎನ್ನುವಂತಾಗಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಯಾರು ಇಲ್ಲದಂತಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಬಿಜೆಪಿ ನಾಯಕರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಯಾರು ಇಲ್ಲದಂತಾಗಿದೆ. ಹಾಗಾಗಿ ಅವರು ಏನು ಬೇಕಾದರೂ ಮಾಡಬಹುದು" ಎಂದು ಟೀಕಿಸಿದ್ದಾರೆ.
ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಕಾಂಗ್ರೆಸ್ ಸದಸ್ಯೆ ಸವಿತಾ ಹುರಕಡ್ಲಿ ಅವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇದು ಬಿಜೆಪಿಯ ಸಂಸ್ಕೃತಿ. ಇವರನ್ನು ನಿಯಂತ್ರಣ ಮಾಡುವವರು ಯಾರೂ ಕೂಡಾ ಇಲ್ಲ. ಈ ಕಾರಣದಿಂದ ಬಿಜೆಪಿ ನಾಯಕರು ಯಾರಿಗೆ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈ ರೀತಿಯಾದ ಘಟನೆ ಬೇರೆ ಕಡೆ ನಡೆದಿದ್ದರೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸುತ್ತಾರೆ. ಪೊಲೀಸರ ಎದುರೇ ಹೆಣ್ಣು ಮಕ್ಕಳ ಮೇಲೆ ಈ ಘಟನೆ ನಡೆದಿದ್ದರೂ ಕೂಡಾ ಯಾರೂ ಕೂಡಾ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇವರ ಮೇಲೆ ಯಾವ ರೀತಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತಿದ್ದೇವೆ. ಇದಾದ ಬಳಿಕ ನಾವು ಧ್ವನಿ ಎತ್ತುತ್ತೇವೆ" ಎಂದಿದ್ದಾರೆ.