ಬೆಳಗಾವಿ, ನ. 11 (DaijiworldNews/MB) : ತನ್ನದೇ ಪಕ್ಷದ ಮಹಿಳೆಗೆ ಬಿಜೆಪಿ ಶಾಸಕ ಸಿದ್ದು ಸವದಿ ಹಲ್ಲೆ ನಡೆಸಿದ ಘಟನೆ ನವೆಂಬರ್ 10 ರಂದು ನಡೆದ ಮಹಾಲಿಂಗಪುರ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯ ಸಂದರ್ಭ ನಡೆದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
23 ಸದಸ್ಯರಿರುವ ಮಹಾಲಿಂಗಪುರ ಪುರಸಭೆಯಲ್ಲಿ ಕಾಂಗ್ರೆಸ್ 10 ಸ್ಥಾನ ಹಾಗೂ ಬಿಜೆಪಿ 13 ಸ್ಥಾನವನ್ನು ಹೊಂದಿದೆ. ಈ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನವೆಂಬರ್ 9 ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಈ ಸಂದರ್ಭದಲ್ಲಿ ಮೂವರು ಬಿಜೆಪಿ ಸದಸ್ಯರಾದ ಗೋದಾವರಿ ಭಟ್, ಚಾಂದಿನಿ ನಾಯಕ್ ಹಾಗೂ ಸವಿತಾ ಹುರಕಡ್ಳಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು ಅವರು ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿ ಸವಿತಾ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಗೋದಾವರಿಯವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು.
ಈ ಎಲ್ಲಾ ಬೆಳವಣಿಗೆಯ ಬಗ್ಗೆ ತೀವ್ರ ಆಕ್ರೋಶಕ್ಕೆ ಒಳಗಾದ ಶಾಸಕ ಸವದಿ ಈ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸಿದ್ದಂತೆ ತಡೆದು ಪೊಲೀಸರ ಎದುರೇ ಸವಿತಾ ಹುರಕಡ್ಳಿಯವರನ್ನು ಎಳೆದಾಡಿ ಅವಮಾನಿಸಿದ್ದಾರೆ ಎಂದು ವರದಿಯಾಗಿದೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ದ ವಾಗ್ದಾಳಿ ಆರಂಭಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯುವ ಕಾಂಗ್ರೆಸ್, ''ಬಿಜೆಪಿ ಶಾಸಕ ಸಿದ್ದು ಸವದಿ ಅಧಿಕಾರಕ್ಕೋಸ್ಕರ ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸವಿತಾ ಹುರಕಡ್ಳಿ ಅವರನ್ನು ಎಳೆದಾಡಿದ್ದು ನೀಚತನ . ಬಿಜೆಪಿ ನಾಯಕರಾದ ಶಶಿಕಲಾ ಜೊಲ್ಲೆ, ಶೋಭಾ ಕರಂದ್ಲಾಜೆ, ಮಾಳವಿಕಾರವರೇ ಇದೇನಾ ನಿಮ್ಮ ಶಾಸಕರ ಸಭ್ಯತೆ ಸಂಸ್ಕೃತಿ ?'' ಎಂದು ಪ್ರಶ್ನಿಸಿದೆ.