ಪಾಟ್ನಾ, ನ. 11 (DaijiworldNews/MB) : ''ಬಿಜೆಪಿ ಮೈತ್ರಿ ತೊರೆದು, ಜಾತ್ಯಾತೀಯ ಶಕ್ತಿಗಳ ಜೊತೆ ಸೇರಿ ನಾಯಕತ್ವ ವಹಿಸಿಕೊಳ್ಳಿ'' ಎಂದು ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ಸಿಂಗ್ ಆಹ್ವಾನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ದಿಗ್ವಿಜಯ್ಸಿಂಗ್ ಅವರು, ''ನಿತೀಶ್ ಜಿ, ಬಿಹಾರ ನಿಮಗೆ ಸಣ್ಣದಾಯಿತು. ನೀವು ಭಾರತದ ರಾಜಕೀಯವನ್ನು ಪ್ರವೇಶಿಸಬೇಕು. ಸಮಾಜವಾದಿ ಮತ್ತು ಜಾತ್ಯತೀತ ಸಿದ್ಧಾಂತವನ್ನು ನಂಬುವ ಎಲ್ಲರನ್ನು ಒಂದುಗೂಡಿಸಲು ನೀವು ನೆರವಾಗಬೇಕು. ಸಂಘದ "ವಿಭಜನೆ ಮತ್ತು ಆಳ್ವಿಕೆ" ನೀತಿಗೆ ನೀವು ಬಲತುಂಬಬೇಡಿ. ದಯವಿಟ್ಟು ಈ ಮನವಿಯನ್ನು ಪರಿಗಣಿಸಿ'' ಎಂದು ವಿನಂತಿಸಿದ್ದಾರೆ.
''ಇದು ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರಿಗೆ ನಿಜವಾದ ಗೌರವ. ನೀವು ಅವರ ಪರಂಪರೆಯಿಂದ ಹುಟ್ಟಿದವರಾಗಿದ್ದು ಅಲ್ಲಿಗೆ ಹಿಂತಿರುಗಿ ಬನ್ನಿ. ಬಿಜೆಪಿ / ಸಂಘವನ್ನು ಬಿಡಿ. ದೇಶವನ್ನು ಹಾಳಾಗದಂತೆ ಉಳಿಸಿ. ಆರ್ಎಸ್ಎಸ್ನ ದ್ವಿಮುಖ ನೀತಿ ಜನತಾಪಕ್ಷ ವಿಭಜನೆಗೆ ಕಾರಣವಾಯಿತು ಎಂಬುದನ್ನು ನೆನಪಿಡಿ'' ಎಂದು ಮನವಿ ಮಾಡಿದ್ದಾರೆ.