ಬೆಂಗಳೂರು, ನ.11 (DaijiworldNews/PY): ರಾಷ್ಟ್ರಕವಿ ಕುವೆಂಪು ಅವರ ಪುಣ್ಯತಿಥಿ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಕುವೆಂಪು ಅವರನ್ನು ಸ್ಮರಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿಎಸ್ವೈ ಅವರು, "ಕನ್ನಡದ ಅಗ್ರಮಾನ್ಯ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕರ್ನಾಟಕ ರತ್ನ, ರಾಷ್ಟ್ರಕವಿ ಕುವೆಂಪು ಅವರ ಪುಣ್ಯತಿಥಿಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ. ವಿಶ್ವಮಾನವತೆಯ ಪ್ರತಿಪಾದಕ, ಕನ್ನಡದ ಕಟ್ಟಾಳು ಕುವೆಂಪು ಕನ್ನಡಿಗರ ಪಾಲಿಗೆ ಸದಾ ಸ್ಮರಣೀಯರಾಗಿದ್ದಾರೆ" ಎಂದಿದ್ದಾರೆ.
ಸಚಿವ ಸುಧಾಕರ್ ಅವರು ಟ್ವೀಟ್ ಮಾಡಿದ್ದು, "ಕನ್ನಡ ಸಾರಸ್ವತ ಲೋಕದ ಮಕುಟಮಣಿ, ರಾಷ್ಟ್ರಕವಿ ಕುವೆಂಪು ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು ಅವರ ಉದಾತ್ತ ಚಿಂತನೆಗಳನ್ನೂ, ತತ್ವಸಿದ್ಧಾಂತಗಳನ್ನೂ ಅರಗಿಸಿಕೊಂಡು ಅವನ್ನು ದಾರಿದೀಪವಾಗಿಟ್ಟುಕೊಂಡರೆ ಅದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ". ಎಂದು ತಿಳಿಸಿದ್ದಾರೆ.
"ಕನ್ನಡ ಸಾರಸ್ವತ ಲೋಕದ ದಿಗ್ಗಜ ಕವಿ, ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ದಾರ್ಶನಿಕ ಸಾಹಿತಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಪುಣ್ಯಸ್ಮರಣೆಯಂದು ನಮನಗಳನ್ನು ಸಲ್ಲಿಸೋಣ" ಎಂದು ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ.