ಬೆಂಗಳೂರು, ನ. 11 (DaijiworldNews/MB) : ''ಬಿಜೆಪಿ ಉಪಚುನಾವಣೆಗಳ ಸಮಯದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು. ಸರ್ಕಾರ ರಚಿಸಲು ಸಹಾಯ ಮಾಡಿದ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು'' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಹೇಳಿದರು.
ಮಂಗಳವಾರ ಉಪಚುನಾವಣೆ ಫಲಿತಾಂಶಗಳು ಪ್ರಕಟವಾದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಆಡಳಿತ ಪಕ್ಷವು ಎರಡೂ ಸ್ಥಾನಗಳನ್ನು ಗೆದ್ದಿದೆ. ನನ್ನ ಈ ವಯಸ್ಸಿನಲ್ಲಿ, ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸದ ವ್ಯಕ್ತಿಯಾಗಿ ಕಾಣಲು ನಾನು ಬಯಸುವುದಿಲ್ಲ'' ಎಂದು ಹೇಳಿದರು.
''ನಾನು ಕೆಲವರನ್ನು ಸಚಿವ ಸಂಪುಟಕ್ಕೆ ಸೇರಿಸುವ ಭರವಸೆ ನೀಡಿದ್ದೇನೆ. ಖಂಡಿತವಾಗಿಯೂ ನಾನು ಸಂಪುಟ ವಿಸ್ತರಣೆ ಮಾಡುತ್ತೇನೆ. ಯಾವುದೇ ಅಡೆತಡೆ ಉಂಟಾದರೂ ನಾನು ಹಿಂಜರಿಯುವುದಿಲ್ಲ'' ಎಂದರು.
ಸಂಪುಟ ವಿಸ್ತರಣೆಯನ್ನು ಶೀಘ್ರವಾಗಿ ಕೈಗೊಳ್ಳುವ ವಿಧಾನಗಳ ಬಗ್ಗೆ ಚರ್ಚಿಸಲು ಮತ್ತು ಅಂತಿಮಗೊಳಿಸಲು ಪಕ್ಷದ ಹಿರಿಯ ಮುಖಂಡರ ಸಭೆಯನ್ನು ಒಂದು ಅಥವಾ ಎರಡು ದಿನಗಳಲ್ಲಿ ಕರೆಯುವುದಾಗಿ ಯಡಿಯೂರಪ್ಪ ಹೇಳಿದರು.
ಆರ್.ಆರ್.ನಗರದಲ್ಲಿ 57,000 ಮತಗಳಿಂದ ಜಯಗಳಿಸಿದ ಎನ್.ಮುನಿರತ್ನ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪ್ರಬಲ ಖಾತೆಯನ್ನು ಎದುರು ನೋಡುತ್ತಿದ್ದಾರೆ. ಪ್ರಸ್ತುತ, ರಾಜ್ಯ ಸಂಪುಟದಲ್ಲಿ ಏಳು ಸ್ಥಾನಗಳು ಖಾಲಿ ಇವೆ.