ನವದೆಹಲಿ, ನ. 11 (DaijiworldNews/MB) : ಹನ್ನೊಂದು ರಾಜ್ಯಗಳಲ್ಲಿ 59 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು 41 ಸ್ಥಾನಗಳಲ್ಲಿ ಜಯ ಪಡೆದುಕೊಂಡಿದ್ದು ಈ ಪೈಕಿ ಕಾಂಗ್ರೆಸ್ ಪಾಲಾಗಿದ್ದ 31 ಸ್ಥಾನಗಳು ಕಾಂಗ್ರೆಸ್ ಕೈ ಜಾರಿ ಬಿಜೆಪಿ ಪಾಲಾಗಿದೆ.
ಈ 31 ಸ್ಥಾನಗಳ ಪೈಕಿ ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿಯೇ 26 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಕಿತ್ತುಕೊಂಡಿದೆ. ಅದರಲ್ಲೂ ಗುಜರಾತ್ನಲ್ಲಿ ಎಲ್ಲ ಎಂಟು ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಸೇರಿದೆ. ಗೆದ್ದವರ ಪೈಕಿ ಕಳೆದ ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವನ್ನು ತೊರೆದ ಐವರು ಇದ್ದಾರೆ. 182 ಸದಸ್ಯ ಬಲದ ವಿಧಾನಸಭೆಯಲ್ಲಿ ಇದೀಗ ಬಿಜೆಪಿ 111 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ಬಲ 65 ಕ್ಕೆ ಕುಸಿತ ಕಂಡಿದೆ.
ಇನ್ನು ಮಧ್ಯಪ್ರದೇಶದ ಉಪಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 19 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 9 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿರುವ ಕಾಂಗ್ರೆಸ್ ತನ್ನ 18 ಸ್ಥಾನಗಳನ್ನು ಬಿಜೆಪಿ ಪಾಲಾಗಿಸಿದೆ.
ಉತ್ತರ ಪ್ರದೇಶದ 7 ಕ್ಷೇತ್ರಗಳ ಪೈಕಿ 6 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು 1 ಸ್ಥಾನ ಮಾತ್ರ ಸಮಾಜವಾದಿ ಪಕ್ಷಕ್ಕೆ ದಕ್ಕಿದೆ.
ಇನ್ನು ಕಾಂಗ್ರೆಸ್ ಭದ್ರಕೋಟೆ ಎಂದೇ ಆಗಿದ್ದ ಮಣಿಪುರದಲ್ಲೂ ಕೂಡಾ ಕೈ ಪಾಳಯದ 4 ಸ್ಥಾನಗಳು ಕಮಲದ ತೆಕ್ಕೆ ಸೇರಿದೆ. ಹಾಗೆಯೇ ಕಾಂಗ್ರೆಸ್ನ 1 ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.