ಪಾಟ್ನಾ, ನ. 11 (DaijiworldNews/MB) : ಸತತ 19 ಗಂಟೆಗಳ ಮತ ಎಣಿಕೆ ಪ್ರಕ್ರಿಯೆಯ ಬಳಿಕ ಈಗ ಎನ್ಡಿಎಯು ಸ್ಪಷ್ಟ ಬಹುಮತವನ್ನು ಪಡೆದಿದ್ದು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಹಾರವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಆದರೆ ಈ ನಡುವೆ ಆರ್ಜೆಡಿ 75 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿ ಸ್ಪರ್ಧಿಸಿದ್ದ ಒಟ್ಟು 110 ಸ್ಥಾನಗಳ ಪೈಕಿ 74 ರಲ್ಲಿ ಗೆಲುವು ಸಾಧಿಸಿದ್ದು ಆರ್ಜೆಡಿಯು 75 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಕಳೆದ ಬಾರಿ ಆರ್ಜೆಡಿಯು 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಆರ್ಜೆಡಿ 75 ಪಡೆಯುವ ಮೂಲಕ ಕಳೆದ ಬಾರಿ ಪಡೆದುಕೊಂಡಿದ್ದ 5 ಸ್ಥಾನಗಳನ್ನು ಕಳೆದುಕೊಂಡಿದ್ದು, ಬಿಜೆಪಿ 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕ 21 ಕ್ಷೇತ್ರಗಳಲ್ಲಿ ಹೊಸದಾಗಿ ಜಯ ಸಾಧಿಸಿದೆ.
ಕಾಂಗ್ರೆಸ್ ಒಟ್ಟು 19 ಕ್ಷೇತ್ರದಲ್ಲಿ ಗೆದ್ದಿದ್ದು ಕಳೆದ ಬಾರಿ ಗೆಲುವು ಸಾಧಿಸಿದ್ದ 8 ಕ್ಷೇತ್ರಗಳು ಕಾಂಗ್ರೆಸ್ ಕೈ ಜಾರಿದೆ. ಎಲ್ಜೆಪಿ 1 ಕ್ಷೇತ್ರದಲ್ಲಿ ಜಯ ಗಳಿಸಿದ್ದು ಕಳೆದ ಬಾರಿ 2 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಇತರರು ಒಟ್ಟು 31 ಕ್ಷೇತ್ರದಲ್ಲಿ ಗೆಲುವು ಪಡೆದಿದ್ದು 21ಕ್ಷೇತ್ರದಲ್ಲಿ ಹೊಸದಾಗಿ ಗೆಲುವು ಪಡೆದಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಕ್ಷೇತ್ರಗಳ ಗೆಲುವು ಅಗತ್ಯವಾಗಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟವು ಒಟ್ಟು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟಬಹುಮತ ಪಡೆದಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ-ಕಾಂಗ್ರೆಸ್ ಹಾಗೂ ಇತರ ಮೂರು ಪಕ್ಷಗಳನ್ನು ಒಳಗೊಂಡ ಮಹಾಘಟ ಬಂಧನ್ 110 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
ಎನ್ಡಿಎ : 125 (ಬಿಜೆಪಿ 74, ಜೆಡಿಯು 43, ವಿಐಪಿ 4, ಎಚ್ಎಎಂ 4)
ಮಹಾಘಟ ಬಂಧನ್ : 110 (ಆರ್ಜೆಡಿ 75, ಕಾಂಗ್ರೆಸ್ 19, ಎಡಪಕ್ಷಗಳು 16).
ಎಐಎಂಐಎ 5, ಬಿಎಸ್ಪಿ 1, ಎಲ್ಜೆಪಿ 1, ಪಕ್ಷೇತರ 1 ಸ್ಥಾನಗಳಲ್ಲಿ ಜಯಪಡೆದಿದೆ.