ಬೆಂಗಳೂರು, ನ.10 (DaijiworldNews/PY): ಶಿರಾ ಹಾಗೂ ಆರ್.ಆರ್.ನಗರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಫಲಿತಾಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಡುವೆ ಟ್ವೀಟ್ ಸಮರ ಪ್ರಾರಂಭವಾಗಿದೆ.
ಮೊದಲು ಟ್ವೀಟ್ ಮಾಡಿರುವ ಬಿಜೆಪಿ, "ಸಿದ್ದರಾಮಯ್ಯ: ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯ ಅಲೆಯೇ ಇಲ್ಲ . . . ಮತದಾರ: ಅಯ್ಯೋ, ಸಿದ್ದರಾಮಯ್ಯನವರೇ ಇಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷವೇ ಇಲ್ಲವಲ್ಲ" ! ! ! ಎಂದಿದೆ.
"ಧನ್ಯವಾದಗಳು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೇ ನೀವು ನಿಮ್ಮ ಯಜಮಾನ ರಾಹುಲ್ ಗಾಂಧಿ ಅವರಂತೆಯೇ ಕಾಂಗ್ರೆಸ್ ನಿರ್ನಾಮಕ್ಕೆ ಪಣತೊಟ್ಟಿದ್ದೀರಿ. ನಮ್ಮ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಭವಿಷ್ಯವಾಣಿಯನ್ನು ನೀವಿಬ್ಬರು ಜೋಡೆತ್ತುಗಳು ನಿಜ ಮಾಡಿದಿರಿ" ಎಂದು ತಿಳಿಸಿದೆ.
"ಮಾನ್ಯ ಸಿದ್ದರಾಮಯ್ಯ, ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಹಗಲಿರುಳು ಪಕ್ಷ ಕಟ್ಟುತ್ತಿರುವ ಬೀದಿ ಬದಿಯ ಕಾರ್ಯಕರ್ತ ಶ್ರೀ ನಳಿನ್ ಕುಮಾರ್ ಕಟೀಲ್ ಅವರನ್ನು ಜನತೆ ಆಶೀರ್ವದಿಸಿದ್ದಾರೆ. ಕುತಂತ್ರದ ಮೂಲಕ ಕಾಂಗ್ರೆಸ್ ಅನ್ನು ಹಳ್ಳಕ್ಕೆ ಕೆಡುವುದರಲ್ಲಿ ಯಶಸ್ವಿಯಾಗಿದ್ದೀರಿ. ನಿಮಗೆ ಶುಭಾಶಯಗಳು" ಎಂದಿದೆ
ಬಿಜೆಪಿಯ ಟ್ವೀಟ್ಗೆ ಪ್ರತಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಹಣಬಲ, ತೋಳ್ಬಲ, ಅಧಿಕಾರ ಬಲದಿಂದ ಗೆದ್ದ ಮಾತ್ರಕ್ಕೆ ಅಹಂ ತಲೆಗೇರಿಸಿಕೊಳ್ಳಬೇಡಿ. ಇಂತಹ ಆಹಂಕಾರಗಳನ್ನ ಬಿಟ್ಟು ಕೊರೊನಾದಿಂದ ಕಂಗೆಟ್ಟ ಜನತೆಯ ಕಷ್ಟಕ್ಕೆ ಸ್ಪಂದಿಸಿ, ಜಿಎಸ್ಟಿ ಪಾಲು ತರಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಅದರತ್ತ ಗಮನಿಸಿ. ಗಾಂಭೀರ್ಯತೆ ಅರಿಯದ ನಿಮ್ಮ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಜ್ಞಾವಂತಿಕೆಯ ಟ್ಯೂಷನ್ ಕೊಡಿಸಿ" ಎಂದು ತಿರುಗೇಟು ನೀಡಿದೆ.