ಬೆಂಗಳೂರು, ನ.10 (DaijiworldNews/PY): "ಇದು ಸಿಎಂ ಬಿಎಸ್ವೈ ಸರ್ಕಾರದ ಜನಪರ ಕಾರ್ಯಗಳಿಗೆ ಸಿಕ್ಕ ಗೆಲುವು" ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪಕ್ಷದ ಅಭ್ಯರ್ಥಿ ಶ್ರೀ ಮುನಿರತ್ನ ಅವರಿಗೆ ಅಭಿನಂದನೆಗಳು. ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪಅವರ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳಿಗೆ ಬೆಂಬಲ ನೀಡಿದ ಜನತೆಗೆ ಮತ್ತು ಗೆಲುವಿಗೆ ಕಾರಣರಾದ ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು" ಎಂದಿದ್ದಾರೆ.
"ಜ್ಯೋತಿಷಿಗಳ ಮಾತು ಕೇಳಿ ಅಭ್ಯರ್ಥಿ ಹಾಕದೆ ಜನರ ನಾಡಿಮಿಡಿತ ಅರಿತು ಅಭ್ಯರ್ಥಿ ಹಾಕಿದ್ದರೆ ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಇಷ್ಟು ಹೀನಾಯ ಸೋಲು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ. ಮುನಿರತ್ನ ಅವರ ಜನಪರ ಕಾರ್ಯಗಳು ಆರ್ ಆರ್ ನಗರದ ಜನತೆಯ ಮನ ಗೆದ್ದಿದ್ದು ಹ್ಯಾಟ್ರಿಕ್ ಗೆಲುವು ನೀಡುವ ಮೂಲಕ ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
"ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರಿಗೆ ಅಭಿನಂದನೆಗಳು. ಈ ಅಭೂತಪೂರ್ವ ವಿಜಯ ಸಾಧಿಸಲು ಶ್ರಮಿಸಿದ ಪಕ್ಷದ ಎಲ್ಲಾ ನಾಯಕರಿಗೂ ಮತ್ತು ಕಾರ್ಯಕರ್ತರಿಗೂ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.