ಬಾಗಲಕೋಟೆ, ನ.10 (DaijiworldNews/PY): "ಶಿರಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಉಪಚುನಾವಣೆಯ ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಜನರ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರದಲ್ಲಿರುವವರು ಮುಕ್ತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವಮತ ಜವಾಬ್ದಾರಿ ಹೊಂದಿರುತ್ತಾರೆ. ನನಗೆ ಇರುವ ಮಾಹಿತಿಯ ಪ್ರಕಾರ, ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಆದರೆ, ಪ್ರಜಾಪ್ರಭುತ್ವದಲ್ಲಿ ಜನರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ಒಪ್ಪಿಕೊಂಡಿದ್ದೇವೆ" ಎಂದಿದ್ದಾರೆ.
ಉಪಚುನಾವಣೆ ಬಳಿಕ ಸಿಎಂ ಬಿಎಸ್ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎನ್ನುವ ಮಾತನ್ನು ಮತ್ತೊಮ್ಮೆ ನೆನಪಿಸಿದ ಅವರು, "ಈ ಹೇಳಿಕೆಗೆ ನಾನೂ ಈಗಲೂ ಬದ್ದ. ನನಗೆ ತಿಳಿದಿರುವ ಮಾಹಿತಿಯ ಪ್ರಕಾರ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ" ಎಂದು ತಿಳಿಸಿದ್ದಾರೆ.