ಬೆಂಗಳೂರು, ನ. 10 (DaijiworldNews/MB) : ಈಗಾಗಲೇ ಆರ್ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಈಗ ಶಿರಾ ಕ್ಷೇತ್ರದಲ್ಲೂ ಜಯಭೇರಿ ಬಾರಿಸಿದ್ದು ಈ ಕ್ಷೇತ್ರವು ಮೊದಲ ಬಾರಿಗೆ ಬಿಜೆಪಿ ಪಾಲಾಗಿದೆ. ಬಿಜೆಪಿ ಅಭ್ಯರ್ಥಿ ರಾಜೇಶ್ ಅವರು 12,949 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಾಜೇಶ್ ಒಟ್ಟು 74,522 ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರಿಗೆ ಸೋಲುನುಣಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮರವರು 35,982 ಮತವನ್ನು ಪಡೆದಿದ್ದು ಜಯಚಂದ್ರರವರು 61,573 ಮತಗಳನ್ನು ಗಳಿಸಿದ್ದಾರೆ.
ಇನ್ನು ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಭ್ಯರ್ಥಿ ರಾಜೇಶ್, ''ನಾವು ಎರಡೂ ಕ್ಷೇತ್ರದಲ್ಲೂ ಭರ್ಜರಿ ಗೆಲವು ಸಾಧಿಸಿದ್ದೇವೆ. ಈ ಗೆಲುವಿಗೆ ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ದಿ ಕಾರ್ಯಗಳೇ ಕಾರಣ. ನಾವೆಂದಿಗೂ ಹಣ ಹಂಚಿ ಚುನಾವಣೆಯಲ್ಲಿ ಜಯ ಗಳಿಸಿದವರು ಅಲ್ಲ'' ಎಂದು ಹೇಳಿದ್ದಾರೆ.