ಬೆಂಗಳೂರು, ನ. 10 (DaijiworldNews/MB) : ಆರ್ಆರ್ ನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 57,936 ಮತಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದು ಆರ್ ಆರ್ ನಗರ ಕ್ಷೇತ್ರ ಬಿಜೆಪಿ ತೆಕ್ಕೆಗೆ ಸೇರಿದೆ.
ಒಟ್ಟು 25 ಸುತ್ತಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು ಬಿಜೆಪಿ ಅಭ್ಯರ್ಥಿ ಮುನಿರತ್ನ 1,25,734 ಮತ ಗಳಿಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಸೋಲುಣಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 67,798 ಮತಗಳನ್ನು ಗಳಿಸಿದ್ದು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 10,251 ಮತಗಳನ್ನು ಪಡೆದಿದ್ದಾರೆ. ಒಟ್ಟು 2,494 ನೋಟಾವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ''ಮೊದಲ ಚುನಾವಣೆಯ ಸಂದರ್ಭ ನಾನು 17 ಸಾವಿರ ಮತಗಳನ್ನು, ಎರಡನೇ ಚುನಾವಣೆಯ ಸಂದರ್ಭ 26 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆ. ಆದರೆ ಈ ಬಾರಿ 57 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿರುವುದು ಸಂತೋಷವಾಗಿದೆ. ನನ್ನ ಗೆಲುವಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು ಶಾಸಕರು ಎಲ್ಲರೂ ಕಾರಣ. ಅವರಿಗೆ ನನ್ನ ಗೆಲುವನ್ನು ಸಮರ್ಪಿಸುತ್ತೇನೆ'' ಎಂದು ಹೇಳಿದರು.