ಪಾಟ್ನಾ, ನ. 10 (DaijiworldNews/MB) : ''ಅಪ್ರಾಮಾಣಿಕವಾಗಿ ಗೆಲ್ಲಲು ಅಸಾಧ್ಯವಾದರೆ ಅಧಿಕಾರಕ್ಕಾಗಿ ಎನ್ಡಿಎ ಏನು ಬೇಕಾದರೂ ಮಾಡುತ್ತದೆ'' ಎಂದು ಕಾಂಗ್ರೆಸ್ ನಾಯಕ ಲವ್ ಸಿನ್ಹಾ ಹೇಳಿದ್ದಾರೆ.
''ಈಗ ಎಚ್ಚರದಿಂದ ಎಲ್ಲವನ್ನೂ ಗಮನಿಸುತ್ತಿರಬೇಕು. ನಾನು ಈ ಸಮಯದಲ್ಲಿ ಯಾವುದೇ ಹೇಳಿಕೆಗಳನ್ನು ನೀಡಲ್ಲ'' ಎಂದು ಲವ್ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ಲವ್ ಸಿನ್ಹಾ, ''ಎನ್ಡಿಎಗೆ ಪ್ರಾಮಾಣಿಕ ವಿಧಾನದಿಂದ ಗೆಲ್ಲಲು ಸಾಧ್ಯವಾಗದಿದ್ದರೆ, ಅಧಿಕಾರಕ್ಕಾಗಿ ಎನ್ಡಿಎ ಏನು ಬೇಕಾದರೂ ಮಾಡುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಬಿಜೆಪಿ ತನ್ನ ಹಳೆಯ ಕಾರ್ಯತಂತ್ರವನ್ನು ಕರಗತ ಮಾಡಿಕೊಂಡಿದೆ'' ಎಂದು ದೂರಿದ್ದಾರೆ.
ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಪ್ರಸ್ತುತ, ಎನ್ಡಿಎ ಒಕ್ಕೂಟ 125, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ 108 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಕ್ಷೇತ್ರಗಳ ಗೆಲುವು ಅಗತ್ಯವಾಗಿದೆ.