ಬೆಂಗಳೂರು, ನ. 10 (DaijiworldNews/MB) : ರಾಜ್ಯದ ಮುಜರಾಯಿ ಇಲಾಖೆಯಡಿಯಲ್ಲಿ ಬರುವ ದೇವಾಲಯಗಳಿಗೆ ಸೇರಿದ 50,000 ಕ್ಕೂ ಹೆಚ್ಚು ಪುರೋಹಿತರಿಗೆ ಪಿಂಚಣಿ, ಜೀವ, ಆರೋಗ್ಯ ವಿಮೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಪ್ರಸ್ತುತ ಮುಜರಾಯಿ ಇಲಾಖೆಯಡಿಯಲ್ಲಿ 34,000 ದೇವಾಲಯಗಳಿದ್ದು ಅರ್ಚಕರಿಗೆ ಪಿಂಚಣಿ, ಆರೋಗ್ಯ ವಿಮೆ ಮತ್ತು ಜೀವ ವಿಮೆ ನೀಡುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ. ಸುಮಾರು ಮೂರು ವಾರಗಳಲ್ಲಿ ಸ್ಪಷ್ಟ ನಿರ್ಧಾರವನ್ನು ನಿರೀಕ್ಷಿಸಬಹುದಾಗಿದೆ. ಪುರೋಹಿತರು, ದೇವಾಲಯಗಳಿಗೆ ಸೇವೆ ಸಲ್ಲಿಸುತ್ತಿರುವ ಇತರ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಆರೋಗ್ಯ ವಿಮೆಯನ್ನು ಒದಗಿಸುವ ಬಗ್ಗೆ ಪ್ರಸ್ತುತ ಉನ್ನತ ಮಟ್ಟದ ಚರ್ಚೆ ನಡೆಯುತ್ತಿದೆ. ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೂ ಅವರನ್ನು ಸೇರಿಸಿಕೊಳ್ಳಬಹುದೇ ಅಥವಾ ಯೋಜನೆಯಲ್ಲಿ ಪಟ್ಟಿ ಮಾಡಲಾದ ಕಾಯಿಲೆಗಳಿಗೆ ಮಾತ್ರವೇ ಎಂಬ ಬಗ್ಗೆ ನಿರ್ಧಾರ ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ. ಇನ್ನೂ ಕೆಲವು ರೋಗಗಳನ್ನು ಪಟ್ಟಿಗೆ ಸೇರಿಸಲು ಸಲಹೆಗಳೂ ಇವೆ.
ದೇವಾಲಯಗಳ ಪುರೋಹಿತರು ಮತ್ತು ಸಿಬ್ಬಂದಿಗೆ ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡ ಬಳಿಕ ಅವರು ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿತ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿದೆ.
ಐದರಿಂದ ಏಳು ಲಕ್ಷ ರೂಪಾಯಿಗಳ ಜೀವ ವಿಮೆ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಸಾವು, ಶಾಶ್ವತ ಅಂಗವೈಕಲ್ಯ ಇತ್ಯಾದಿಗಳು ಸಂಭವಿಸಿದ ಸಂದರ್ಭ ಈ ಮೊತ್ತವನ್ನು ಸಂತ್ರಸ್ಥರಿಗೆ ಅಥವಾ ಸಂತ್ರಸ್ಥರ ಕುಟುಂಬಕ್ಕೆ ನೀಡಲಾಗುತ್ತದೆ.
ಪ್ರಸ್ತುತ, ಪುರೋಹಿತರು ಮತ್ತು ಇತರ ನೌಕರರ ವೇತನವನ್ನು ದೇವಾಲಯಗಳು ಪೂರೈಸುತ್ತಿದೆ. ಪುರೋಹಿತರ ಇಡೀ ಕುಟುಂಬ ಬಿಕ್ಕಟ್ಟು ಎದುರಿಸುತ್ತದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ವೇತನ ಮತ್ತು ವಿಮಾ ಸೌಲಭ್ಯಗಳ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಅರ್ಚಕರು ಮತ್ತು ನೌಕರರ ವಯಸ್ಸಿನ ಅಂಕಿಅಂಶಗಳನ್ನು ಒಟ್ಟುಗೂಡಿಸುತ್ತಿದೆ ಎಂದು ವರದಿ ತಿಳಿಸಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ''ಅರ್ಚಕರು ಮತ್ತು ಇತರ ಸಿಬ್ಬಂದಿಯನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ'' ಎಂದು ಹೇಳಿದ್ದಾರೆ.