ಬೆಂಗಳೂರು, ನ.10 (DaijiworldNews/PY): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ ಕೆಮಿಕಲ್ ಫಾಕ್ಟರಿಯೊಂದರಲ್ಲಿ ಬೃಹತ್ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.
ನಗರದ ಹೊಸ ಗುಡ್ಡದಹಳ್ಳಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ಆರಿಸಲು ಅಗ್ನಿ ಶಾಮಕ ದಳ ಹರಸಾಹಸ ಪಡುತ್ತಿದೆ. ಬೃಹತ್ ಪ್ರಮಾಣದಲ್ಲಿ ಬೆಂಕಿ ಆವರಿಸಿರುವ ಕಾರಣ ಅಕ್ಕ ಪಕ್ಕದ ಮನೆಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇನ್ನು ಅಕ್ಕ-ಪಕ್ಕದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಪ್ರಯತ್ನ ನಡೆಸುತ್ತಿದ್ದಾರೆ.
ಫಾಕ್ಟರಿಯ ಅಕ್ಕ-ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಬ್ಯಾಟರಾಯನಪುರ ಪೊಲೀಸರು ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ.
ಇಲ್ಲಿಯವರೆಗೆ ಘಟನೆಯ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ.