ಪಾಟ್ನ, ನ. 10 (DaijiworldNews/MB) : ಬಿಹಾರದಲ್ಲಿದ್ದು ಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಪ್ರಸ್ತುತ ಬಿಜೆಪಿ, ಜೆಡಿಯು ನೇತೃತ್ವದ ಎನ್ಡಿಎ ಕೂಟ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆದರೆ ಈ ಮಧ್ಯೆ ಜೆಡಿಯು ವಕ್ತಾರರೋರ್ವರು ''ನಮ್ಮ ಸೋಲಿಗೆ ಕೊರೊನಾ ಕಾರಣ'' ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಬಿಹಾರದಲ್ಲಿ ಆಡಳಿತರೂಢ ಜೆಡಿಯು ಪಕ್ಷದ ವಕ್ತಾರ ಕೆ. ಸಿ. ತ್ಯಾಗಿ ಎಂಬವರು ಮತ ಎಣಿಕೆ ಮುಕ್ತಾಯಕ್ಕೂ ಮುನ್ನ ಸೋಲೊಪ್ಪಿಕೊಳ್ಳುವ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.
''ನಾವು ಜನರ ನಿರ್ಧಾರವನ್ನು ಎಂದಿಗೂ ಸ್ವಾಗತಿಸುತ್ತೇವೆ. ನಾವು ತೇಜಸ್ವಿ ಅಥವಾ ಆರ್ಜೆಡಿಯಿಂದಾಗಿ ಸೋತಿಲ್ಲ. ಬದಲಾಗಿ ಕೊರೊನಾ ಶಾಪದಿಂದಾಗಿ ಸೋತಿದ್ದೇವೆ'' ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
''ನಾವಿಂದು ಬಿಹಾರದಲ್ಲಿ ಕಳೆದ 70 ವರ್ಷದಲ್ಲಿ ಏನೆಲ್ಲಾ ಆಗಿದೆಯೋ ಅದಕ್ಕೆ ಬೆಲೆ ತೆತ್ತಿದ್ದೇವೆ'' ಎಂದು ಕೂಡಾ ಜೆಡಿಯು ಪಕ್ಷದ ವಕ್ತಾರ ಹೇಳಿದ್ದಾರೆ.