ಮೈಸೂರು, ನ. 10 (DaijiworldNews/MB) : ವಿವಾಹಕ್ಕೆ ಮುಂಚಿತವಾಗಿ ಫೋಟೋಶೂಟ್ ಮಾಡಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಇದೇ ಫೋಟೋ ಶೂಟ್ ದುರಂತಕ್ಕೆ ತಿರುಗಿದ ಘಟನೆ ತಿರುಮಕೂಡಲು ನರಸೀಪುರದಲ್ಲಿ ನಡೆದಿದೆ. ಫೋಟೋ ಶೂಟ್ ಮಾಡಿಸುತ್ತಿದ್ದ ಜೋಡಿಯು ತಲಕಾಡು ಕಾವೇರಿ ನದಿಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರು ಮೈಸೂರಿನ ಹೊರವಲಯದಲ್ಲಿರುವ ತಿರುಮಕೂಡಲು ನರಸೀಪುರದ ಕ್ಯಾತಮಾರನಹಳ್ಳಿಯವರಾದ ಚಂದ್ರು (28) ಮತ್ತು ಶಶಿಕಲಾ (20) ಎಂದು ಪೊಲೀಸರು ತಿಳಿಸಿದ್ದಾರೆ.
ಈ ಜೋಡಿಯ ವಿವಾಹವು ನವೆಂಬರ್ 22 ರಂದು ನಡೆಯಲಿತ್ತು. ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗಾಗಿ ಕಾವೇರಿ ನದಿಯ ಮೂಲವಾದ ತಲಕಾಡಿಗೆ ಈ ಜೋಡಿ, ಕುಟುಂಬ ಸದಸ್ಯರು ಹಾಗೂ ಪೋಟೋಗ್ರಾಫರ್ ಬಂದಿದ್ದರು.
ಈ ಜೋಡಿಯು ಪ್ರಸಿದ್ದ 'ಟೈಟಾನಿಕ್' ಭಂಗಿಯಲ್ಲಿ ಫೋಟೋ ತೆಗೆಯಲೆಂದು ಕುಳಿತಿದ್ದರು. ಮಳೆಯ ಕಾರಣದಿಂದಾಗಿ ನೀರಿನ ರಭಸ ಜೋರಾಗಿತ್ತು. ಈ ಕಾರಣದಿಂದಾಗಿ ಅವರು ಕುಳಿತಿದ್ದ ತೆಪ್ಪದ ನಿಯಂತ್ರಣ ತಪ್ಪಿದ್ದು ಈ ಜೋಡಿ ನದಿಯಲ್ಲಿ ಮುಳುಗಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ತೆಪ್ಪದಲ್ಲಿದ್ದ ಮತ್ತೋರ್ವ ನೀರಿನಲ್ಲಿ ಈಜಿ ತನ್ನನ್ನು ತಾನು ಉಳಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳ ಮೃತದೇಹವನ್ನು ಮೀನುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆ ಎತ್ತಿದ್ದಾರೆ. ಈ ಬಗ್ಗೆ ತಲಕಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.