ಬೆಂಗಳೂರು, ನ. 10 (DaijiworldNews/MB) : ಇತ್ತೀಚೆಗೆ ನಡೆದ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಈ ಕ್ಷೇತ್ರಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಮಧ್ಯಾಹ್ನ ಸುಮಾರು 12 ಗಂಟೆ ವೇಳೆ ಈ ಎರಡು ಕ್ಷೇತ್ರಗಳನ್ನು ಯಾವ ಪಕ್ಷದ ಅಭ್ಯರ್ಥಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬೀಳಲಿದೆ.
ಸಾಂದರ್ಭಿಕ ಚಿತ್ರ
ಶಿರಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಇದ್ದಾರೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ಗೌಡ, ಟಿಬಿ ಜಯಚಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ನಡುವೆ ತೀವ್ರ ಸ್ಪರ್ಧೆಯಿದೆ. ಮತ್ತೊಂದು ಪ್ರಮುಖ ಕ್ಷೇತ್ರವಾದ ಆರ್ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಅಖಾಢದಲ್ಲಿದ್ದಾರೆ.
ಇನ್ನು ಈ ಮತ ಎಣಿಕೆ ನಡೆಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ. ಶಿರಾ ಕ್ಷೇತ್ರದಲ್ಲಿ ಕೇಂದ್ರ ಶಸ್ತ್ರಾಸ್ತ್ರ ಪಡೆ, ಕೆಎಸ್ಆರ್'ಪಿ ತುಕಡಿ ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ 200ಕ್ಕೂ ಹೆಚ್ಚು ಪೊಲೀಸರನ್ನು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮೂವರು ಡಿಸಿಪಿ, 8 ಎಸಿಪಿ, 41 ಇನ್ಸ್ಪೆಕ್ಟರ್, 105 ಪಿಎಸ್ಐ, 179 ಎಎಸ್ಐ, 183 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ 1,670 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.