ಬೆಂಗಳೂರು, ನ. 10 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದ ಪದವಿ, ಎಂಜನೀಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ನವೆಂಬರ್ 17ರಿಂದ ಮತ್ತೆ ಆರಂಭ ಮಾಡಲಾಗುತ್ತಿದೆ. ಈ ಬಗ್ಗೆ ಸೋಮವಾರ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ''ಆಫ್ಲೈನ್ ಆಗಿಯೇ ತರಗತಿಗಳನ್ನು ಪ್ರಾರಂಭಿಸಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಈ ಎಸ್ಒಪಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸೂಚನೆಗಳಿವೆ. ಅದರಂತೆ ತರಗತಿಗಳು ನಡೆಯುತ್ತವೆ. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಸೂಚನೆಗಳು ಇದೆ'' ಎಂದು ತಿಳಿಸಿದ್ದಾರೆ.
ಇನ್ನು ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕಾದರೆ ಅವರ ಪೋಷಕರ ಸಹಿ ಇರುವ ನಿಗದಿತವಾದ ಒಪ್ಪಿಗೆ ಪತ್ರವನ್ನು ಕಾಲೇಜುಗಳಿಗೆ ನೀಡಬೇಕಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಇಚ್ಛಿಸದಿದ್ದರೆ ಅವರು ಆನ್ಲೈನ್ನಲ್ಲೇ ಶಿಕ್ಷಣ ಮುಂದುವರೆಸಬಹುದು. ಆದರೆ ಈ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿ ದಿನವು ಭೌತಿಕ ಸಂಪರ್ಕ ತರಗತಿಗಳನ್ನು ನಡೆಸಬೇಕು.
ಹಾಗೆಯೇ ಕಾಲೇಜುಗಳಲ್ಲಿ ಅವಶ್ಯವಿದ್ದಲ್ಲಿ ಬೋಧನಾ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಪಾಳಿ ವ್ಯವಸ್ಥೆಯಲ್ಲಿ ನಡೆಸಬೇಕು. ದೈಹಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ, ಅದಕ್ಕೆ ಅನುಸಾರವಾಗಿ ಕೊಠಡಿಯ ವ್ಯವಸ್ಥೆ ಮಾಡಬೇಕು. ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯಸಾಮಾಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು. ಮಾಡಿಸಬೇಕು.
ಇನ್ನು ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೊರೊನಾ ಪರೀಕ್ಷೆಯನ್ನು ಮಾಡಿಕೊಂಡು ಪರೀಕ್ಷಾ ವರದಿ ನೆಗೆಟಿವ್ ಇದ್ದರೆ ಮಾತ್ರ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಿಗೆ ಹಾಜರಾಗಬಹುದಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲ್ಲೇ ಊಟ, ನೀರು ತರಬೇಕಾಗಿದೆ. ಹಾಗೆಯೇ ಪ್ರತಿ ತರಗತಿಗೆ ಓರ್ವ ವಿದ್ಯಾರ್ಥಿಯನ್ನು ಗುರುತಿಸಿ ಆ ವಿದ್ಯಾರ್ಥಿ ತರಗತಿಯಲ್ಲಿ ತನ್ನ ಸಹಪಾಠಿಗಳಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದರೆ ಕೊರೊನಾ ಕಾರ್ಯಪಡೆ ಅಥವಾ ಸೆಲ್ ಗಮನಕ್ಕೆ ತರಬೇಕು.