ಬೆಂಗಳೂರು, ನ.09 (DaijiworldNews/PY): ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ಸೇರಿದಂತೆ ಮೂವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಡ್ರಗ್ಸ್ ಪೆಡ್ಲರ್ಗಳಿಗೆ ಗೋವಾದಲ್ಲಿ ಆಶ್ರಯ ನೀಡಿದ್ದ ಆರೋಪದಡಿ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡಾರ್ಕ್ ವೆಬ್ಸೈಟ್ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದವರ ಮಾಹಿತಿಯನ್ನು ಪತ್ತೆ ಹಚ್ಚಿದ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನ.4ರಂದು ದಾಳಿ ನಡೆಸಿದ್ದರು.
ವಿದೇಶದಿಂದ ಫಾರಿನ್ ಪೋಸ್ಟ್ ಆಫೀಸ್ಗೆ ಡ್ರಗ್ಸ್ ಪಾರ್ಸೆಲ್ ಬರುತ್ತಿದ್ದು, ಈ ವಿಚಾರದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ನಡೆಸಿದ್ದ ಸಂದರ್ಭ ಆರೋಪಿ ಸುಜಯ್ ಎಂಬಾತ ಗಾಂಜಾ ಸಮೇತವಾಗಿ ಸಿಸಿಬಿ ಬಲೆಗೆ ಬಿದ್ದಿದ್ದ.
ಪೊಲೀಸರು, ಆರೋಪಿ ಸುಜಯ್ ವಿಚಾರಣೆ ನಡೆಸಿದ ಸಂದರ್ಭ ಮತ್ತೆ ಇಬ್ಬರು ಆರೋಪಿಗಳಾದ ಹೇಮಂತ್ ಹಾಗೂ ಸುನೀಶ್ ಬಗ್ಗೆ ತಿಳಿಸಿದ್ದು, ಹೇಮಂತ್ ಹಾಗೂ ಸುನೀಶ್ ಗೋವಾದಲ್ಲಿರುವ ಮಾಹಿತಿಯ ಮೇರೆಗೆ ಪೊಲೀಸರು ಗೋವಾಕ್ಕೆ ತೆರಳಿದ ವೇಳೆ ಹೇಮಂತ್ ಹಾಗೂ ಸುನೀಶ್ ಜೊತೆ ದರ್ಶನ್ ಕೂಡಾ ಸಿಕ್ಕಿಬಿದ್ದಿದ್ದಾನೆ. ಸುನೀಶ್, ಹೇಮಂತ್ ಸೇರಿದಂತೆ ದರ್ಶನ್ನನ್ನು ಪೊಲೀಸರು ಬಂಧಿಸಿದ್ದಾರೆ.