ಮುಂಬೈ, ನ.09 (DaijiworldNews/HR): ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತ ಪಾಠ ಕಲಿತರೆ ಒಳ್ಳೆಯದು ಎಂದು ಶಿವಸೇನೆ ಹೇಳಿದೆ. ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಅಮೇರಿಕಾದ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಹೋಲಿಸಿ ಹೇಳಿಕೆಯನ್ನು ಶಿವಸೇನೆ ನೀಡಿದೆ.
ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ, ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಂದಿಗೂ ರಾಷ್ಟ್ರದ ಅಧ್ಯಕ್ಷ ಪಟ್ಟಕ್ಕೆ ಅರ್ಹರಲ್ಲ. ಅಮೆರಿಕದ ನಾಗರಿಕರು ತಾವು ನಾಲ್ಕು ವರ್ಷದ ಹಿಂದೆ ಮಾಡಿದ್ದ ತಪ್ಪನ್ನು ಸರಿಪಡಿಸಿದ್ದಾರೆ. ಅಂತೆಯೇ ನಾವೂ ಕೂಡ ಟ್ರಂಪ್ ಸೋಲಿನಿಂದ ಕಲಿತರೆ ಒಳ್ಳೆಯದಾಗಲಿದೆ ಎಂದಿದೆ.
ಇನ್ನು ಅಮೇರಿಕಾದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಅದನ್ನು ಬಗೆಹರಿಸುವ ಬದಲು ಟ್ರಂಪ್ ಅಸಂಬದ್ಧ ಹೇಳಿಕೆ, ರಾಜಕೀಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಈಗಾಗಲೇ ಅಮೇರಿಕಾದಲ್ಲಿ ಅಧಿಕಾರ ಬದಲಾಗಿದೆ, ಅದರಂತೆ ಬಿಹಾರದಲ್ಲಿ ಅಧಿಕಾರವು ಬದಲಾವಣೆ ಹಾದಿಯಲ್ಲಿದೆ ಎಂದು ತಿಳಿಸಿದೆ.
ಬಿಜೆಪಿ ವಿರುದ್ಧ ಹೇಳಿಕೆ ನೀಡಿರುವ ಶಿವಸೇನೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೇರಿಕಾದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಟ್ರಂಪ್ ಮಹಿಳೆಯನ್ನು ಗೌರವಿಸಲಿಲ್ಲ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಂತಹ ವ್ಯಕ್ತಿಯನ್ನು ಬೆಂಬಲಿಸುವವರು ಇದರಿಂದ ಕಲಿಯಬೇಕು ಎಂದು ಹೇಳಿದೆ.