ಶಿವಮೊಗ್ಗ, ನ.09 (DaijiworldNews/PY): ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಧಾನ ಪರಿಷತ್ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಪತ್ರ ಬರೆದಿದ್ದಾರೆ.
"ಅಡ್ವಾಣಿ ಅವರು ಏಳು ದಶಕಕ್ಕೂ ಅಧಿಕ ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಡ್ವಾಣಿ ಅವರು ಮಾಡಿರುವಂತ ಎಲ್ಲಾ ಜನಪರ ಸೇವೆಗಳನ್ನು ಗುರುತಿಸಿ ಅವರಿಗೆ ಭಾರತ ರತ್ನ ನೀಡಬೇಕು. ಅಲ್ಲದೇ, ಇದು ರಾಜ್ಯದ ಸಾವಿರಾರು ಜನರ ಅಭಿಲಾಷೆಯೂ ಆಗಿದೆ" ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
"ಆರ್ಎಸ್ಎಸ್, ಭಾರತೀಯ ಜನಸಂಘ ಹಾಗೂ ಬಿಜೆಪಿ ಮೂಲಕ ತಾಯ್ನಾಡಿಗೆ ಸಾಕಷ್ಟು ಕೊಡುಗೆ ಹಾಗೂ ತ್ಯಾಗ ಮಾಡಿದ್ದಾರೆ. ತಮ್ಮ ವಿಶಿಷ್ಟ ಜ್ಞಾನ ಹಾಗೂ ಅನುಭವದ ಮುಖೇನ ಅವರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದು, ಇದರ ಮುಖೇನ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಡ್ವಾಣಿ ಅವರದ್ದು ಅಪರೂಪದ ವ್ಯಕ್ತಿತ್ವವಾಗಿದೆ. ಈ ನಿಟ್ಟಿನಲ್ಲಿ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಬೇಕು" ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
"ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಸಾಮಾನ್ಯ ಮಂದಿ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ವಿನಂತಿಸಿದ್ದಾರೆ. ಭಾರತ ರತ್ನಕ್ಕೆ ಅಡ್ವಾಣಿಯವರು ಯೋಗ್ಯರು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿನ ಪಕ್ಷದ ಸಾವಿರಾರು ಕಾರ್ಯಕರ್ತರ ಪರವಾಗಿ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.