ಮೈಸೂರು, ನ.09 (DaijiworldNews/HR): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಪ್ರಯತ್ನ ಪಡುತ್ತಿದ್ದರೆ, ಇತ್ತ ಶಿವಕುಮಾರ್ ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಅವರು ಪ್ರಯತ್ನ ಪಡುತ್ತಿದ್ದಾರೆ. ಕಚ್ಚಾಟವನ್ನು ಮುಚ್ಚಿಕೊಳ್ಳಲು ಅವರು ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ, ಸಿದ್ದರಾಮಯ್ಯ ಅವರಿಗೆ ಅವರ ಕುರ್ಚಿಯನ್ನು ಉಳಿಸಿಕೊಂಡರೆ ಸಾಕು. ಹಾಗಾಗಿ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆಯೇ ಪರಸ್ಪರ ಉತ್ತಮ ಬಾಂಧವ್ಯ ಇಲ್ಲ. ಒಬ್ಬರಿಗೊಬ್ಬರು ಅಧಿಕಾರವನ್ನು ಕಿತ್ತುಕೊಳ್ಳಲು ಬಡಿದಾಡುತ್ತಿದ್ದಾರೆ ಎಂದರು.
ಇನ್ನು ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಖಂಡಿತ. ಮುನಿರತ್ನ ಅವರ ಪರ ಅಲೆ ಇರುವುದು ನಮಗೆ ಪ್ರಚಾರ ಸಂದರ್ಭದಲ್ಲಿಯೇ ಗೊತ್ತಾಗಿದೆ. ಶೇ.50ರಷ್ಟು ಮಂದಿ ಅವರ ಅಭಿವೃದ್ಧಿ ನೋಡಿ ಮತ ನೀಡಿದರೆ, ಇನ್ನು ಶೇ.50 ಮಂದಿ ಬಿಜೆಪಿ ಪಕ್ಷಕ್ಕಾಗಿ ಮತ ಚಲಾಯಿಸಿದ್ದು, ಈ ಎರಡರಲ್ಲೂ ಬಿಜೆಪಿ ಮುಂದಿದೆ ಎಂದು ಹೇಳಿದ್ದಾರೆ.