ವಿಜಯಪುರ, ನ.09 (DaijiworldNews/PY): ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ಮುಂದಾಗಿದ್ದು, ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪೋಸ್ಟ್ವೊಂದನ್ನು ಮಾಡಿರುವ ಅವರು, "ಹಿಂದೂಗಳು ಸಾಮೂಹಿಕವಾಗಿ ಸೇರುವುದೇ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ, ದಸರಾ-ದುರ್ಗಪೂಜೆ, ದೀಪಾವಳಿ. ಆದರೆ, ಗಣೇಶ ಹಬ್ಬ ಬಂದರೆ ಪರಿಸರ ಸ್ನೇಹಿ ಗಣೇಶೋತ್ಸವ, ದೀಪಾವಳಿ ಬಂದ ಬಳಿಕ ಶಬ್ದ ರಹಿತ ದೀಪಾವಳಿ ಮಾಡಿ ಅಂತ ಬೋಧನೆ ಮಾಡುತ್ತಾರೆ" ಎಂದಿದ್ದಾರೆ.
"ಇನ್ನು ಮುಂದೆ ಪರಿಸರಸ್ನೇಹಿ ಗಣೇಶಹಬ್ಬ, ಶಬ್ದರಹಿತ ದೀಪಾವಳಿ ಇವುಗಳ ಜೊತೆಗೆ ರಕ್ತರಹಿತ ಬಕ್ರೀದ್, ನಿಶಬ್ಧ ಶುಕ್ರವಾರ, ಪಟಾಕಿ ರಹಿತ ಡಿಸೆಂಬರ್ 31 ರಾತ್ರಿ ಇವುಗಳನ್ನು ಮಾಡೋಣ" ಎಂದು ತಿಳಿಸಿದ್ದಾರೆ.
"ಬಕ್ರೀದ್ನಲ್ಲಿ ರಕ್ತಹರಿಸುವುದು ಬೇಡ, ಡಿಸೆಂಬರ್ 31ರ ರಾತ್ರಿ ಪಟಾಕಿ ಹೊಡೆಯುವುದು ಬೇಡ, ಶುಕ್ರವಾರ ಧ್ವನಿವರ್ಧಕ ಬಳಸಿ ಕೂಗುವುದು ಬೇಡ, ರಸ್ತೆ ಮೇಲೆ ನಮಾಜು ಮಾಡುವುದು ಬೇಡ, ಬೀದಿಲಿ ಪಟಾಕಿ ಹೊಡೆಯುವುದು ಬೇಡ, ನಾವು ಮನೆಯಲ್ಲಿ ದೀಪ ಹಚ್ಚುತ್ತೇವೆ, ಅವರು ಸ್ಪೀಕರ್ ಇಲ್ಲದೇ ನಮಾಜು ಮಾಡಲಿ, ರಸ್ತೆ ಮೇಲೆ ಬೇಡ" ಎಂದು ಹೇಳಿದ್ದಾರೆ.